ADVERTISEMENT

ಖುಷಿಗೆ ಕಾರಣವಾದ ಕೃಷಿ ಹೊಂಡ

ಲಭ್ವಿರುವ ನೀರಿನಲ್ಲೇ ಉತ್ತಮ ಬೆಳೆ, ಬಂಜರಿನಲ್ಲೂ ಹಸಿರ ಚಿಗುರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:45 IST
Last Updated 22 ಆಗಸ್ಟ್ 2019, 19:45 IST
ವಿಜಯಪುರ ಹೋಬಳಿ ಚಿನುವಂಡನಹಳ್ಳಿಯ ರೈತ ನಾರಾಯಣಸ್ವಾಮಿ ತನ್ನ ತೋಟದಲ್ಲಿ ಬೆಳೆದಿರುವ ಟೊಮೆಟೋವನ್ನು ಮಾರುಕಟ್ಟೆಗೆ ಕಳುಹಿಸಲು ಸಿದ್ಧಗೊಳಿಸುತ್ತಿರುವುದು
ವಿಜಯಪುರ ಹೋಬಳಿ ಚಿನುವಂಡನಹಳ್ಳಿಯ ರೈತ ನಾರಾಯಣಸ್ವಾಮಿ ತನ್ನ ತೋಟದಲ್ಲಿ ಬೆಳೆದಿರುವ ಟೊಮೆಟೋವನ್ನು ಮಾರುಕಟ್ಟೆಗೆ ಕಳುಹಿಸಲು ಸಿದ್ಧಗೊಳಿಸುತ್ತಿರುವುದು   

ವಿಜಯಪುರ: ‘ಕೆಲವೆಡೆ ಅತಿವೃಷ್ಟಿ. ಇನ್ನು ಕೆಲವೆಡೆ ಅನಾವೃಷ್ಟಿಯಿಂದ ರೈತರು ವ್ಯವಸಾಯವನ್ನು ತೊರೆಯುವಂತಹ ಹಂತ ತಲುಪಿದ್ದಾರೆ. ಮಾತ್ರವಲ್ಲ ಬೆಂಬಲ ಬೆಲೆ, ಪ್ರೋತ್ಸಾಹ, ಸೂಕ್ತ ಸೌಲಭ್ಯಗಳ ಕೊರತೆಯೂ ರೈತರನ್ನು ಕಾಡುತ್ತಿದೆ. ವಿಧಿಯಿಲ್ಲದೆ, ಕೃಷಿಯಿಂದ ವಿಮುಖರಾಗಲು ಸಾಧ್ಯವಾಗದೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಎಂದು ಚಿನುವಂಡನಹಳ್ಳಿ ರೈತ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನುವಂಡನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ, ತಮಗಿರುವ ಕೊಳವೆಬಾವಿಯಲ್ಲಿನ 1800 ಗ್ಯಾಲನ್ ನೀರು ಹಾಗೂ ಕೃಷಿ ಇಲಾಖೆಯಿಂದ ಸಹಾಯಧನ ಪಡೆದು ನಿರ್ಮಿಸಿರುವ ಕೃಷಿಹೊಂಡದಲ್ಲಿ ಶೇಖರಗೊಂಡ ನೀರಿನಿಂದ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಒಂದು ಎಕರೆಯಷ್ಟು ಜಮೀನಿನ ಜೊತೆಗೆ ಪಕ್ಕದಲ್ಲಿದ್ದ ಬಂಜರು ಭೂಮಿಯನ್ನೂ ಗುತ್ತಿಗೆಗೆ ಪಡೆದು ಅಲ್ಲೂ ಬೆಳೆ ಬೆಳೆದಿದ್ದಾರೆ.

ಟೊಮೆಟೋ, ಮ್ಯಾರಿಗೋಲ್ಡ್, ಚೆಂಡು ಹೂ, ರಾಗಿ ಹೀಗೆ ಹಲವು ಬೆಳೆ ಬೆಳೆಯುವಲ್ಲಿ ನಿರತರಾಗಿದ್ದ ಇವರು, ಕೊಳವೆಬಾವಿ ಕೊರೆಯಿಸಲಿಕ್ಕೂ ಹಣವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ನೆರವಾಗಿದ್ದು ಕೃಷಿ ಹೊಂಡ. ಕೃಷಿ ಹೊಂಡ ನಿರ್ಮಾಣ ಮಾಡಿದ ನಂತರ ನೀರಿಗಾಗಿ ಕೊಳವೆಬಾವಿಯನ್ನು ನೆಚ್ಚಿಕೊಳ್ಳುವುದು ತಪ್ಪಿದೆ ಎನ್ನುತ್ತಾರೆ ಅವರು.

ADVERTISEMENT

‘ಟೊಮೆಟೋ ನಾಟಿಗೂ ಮುನ್ನ ಕೋಲಾರದ ಮಾರುಕಟ್ಟೆಯವರು ಅಡ್ವಾನ್ಸ್ ಹಣ ಕೊಡುತ್ತಾರೆ. ಬೆಳೆ ಬಂದ ಮೇಲೆ ಅದನ್ನು ವಾಪಸ್ಸು ಪಡೆಯುತ್ತಾರೆ. ಇತ್ತೀಚೆಗೆ ಟೊಮೆಟೋ ಬೆಲೆ ಏರಿಳಿತಗಳಲ್ಲಿ ಸಾಗುತ್ತಿದೆ. ಒಂದೇ ಬೆಳೆ ನಂಬಿಕೊಂಡಿದ್ದರೆ ಕಷ್ಟವಾಗುತ್ತಿತ್ತು. ಹೂವಿನ ಬೆಳೆಯಲ್ಲಿ ಬಂದ ಆದಾಯದಲ್ಲಿ ಜೀವನ ಸರಿದೂಗಿಸಿಕೊಂಡು ಹೋಗುವುದರ ಜೊತೆಗೆ, ಸಂಕಷ್ಟದಿಂದ ಪಾರಾಗಿದ್ದೇನೆ. ಇದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಸುಧಾರಣೆಯಾಗುತ್ತಿದೆ’ ಎಂದು ಅವರು ತಿಳಿಸಿದರು.

‘ತೋಟಕ್ಕೆ ಕೊಟ್ಟಿಗೆ ಗೊಬ್ಬರವನ್ನೇ ಹಾಕುತ್ತೇನೆ. ಒಂದು ತಿಂಗಳಿಗೆ ₹ 35 ಸಾವಿರ ಖರ್ಚು ಬರುತ್ತದೆ. 5 ಲಕ್ಷದವರೆಗೂ ಸಾಲ ಮಾಡಿದ್ದೇನೆ. ಆದರೆ ತೀರಿಸುವ ಆತ್ಮವಿಶ್ವಾಸವಿದೆ. ಲಭ್ಯವಿರುವ ನೀರಿನಲ್ಲೇ ಬೆಳೆ ಬೆಳೆದು ಜೀವನ ರೂಪಿಸಿಕೊಂಡಿದ್ದೇನೆ. ಜೊತೆಗೆ ಒಂದಷ್ಟು ಮಂದಿಗೆ ಕೆಲಸ ಕೊಟ್ಟಿರುವ ತೃಪ್ತಿಯಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ನಾರಾಯಣಸ್ವಾಮಿ ಅವರ ಪತ್ನಿ ಮಾತನಾಡಿ, ‘ಉತ್ತಮ ತೋಟ ಮಾಡಲು ಬದ್ಧತೆಯಿದ್ದರೆ ಸಾಕು. ಮಳೆಯ ನೀರನ್ನು ಸಂಗ್ರಹಿಸಿದರೆ ಉತ್ತಮ ಬೆಳೆ ಬೆಳೆಯಬಹುದು. ತೋಟದಲ್ಲಿನ ಬೆಳೆಯನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಬೆಳೆಯನ್ನು ಸೂಕ್ತ ಸಮಯಕ್ಕೆ ಪೋಷಣೆ ಮಾಡಿದರೆ ಉತ್ತಮ ಇಳುವರಿ ಸಿಗುತ್ತದೆ. ಕಷ್ಟದ ನಡುವೆಯೇ ತೋಟ ಮಾಡುತ್ತಿದ್ದೇವೆ. ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.