ADVERTISEMENT

ರಾಜ್ಯಪಾಲರ ಮೊರೆ ಹೋದ ರೈತರು

ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಜಲಾಶಯ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 0:01 IST
Last Updated 24 ಜುಲೈ 2025, 0:01 IST
   

ದೊಡ್ಡಬಳ್ಳಾಪುರ: ಎತ್ತಿನಹೊಳೆ ನೀರು ಸಂಗ್ರಹಕ್ಕಾಗಿ ತಾಲ್ಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಉದ್ದೇಶಿತ ಜಲಾಶಯ ನಿರ್ಮಾಣ ವಿರೋಧಿಸಿ ರೈತರು ರಾಜ್ಯಪಾಲರ ಮೊರೆ ಹೋಗಿದ್ದಾರೆ.

ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗಲಿರುವ ಏಳು ಗ್ರಾಮ ಗ್ರಾಮಸ್ಥರ ನಿಯೋಗ ಬುಧವಾರ ಬೆಂಗಳೂರಿನ ರಾಜಭವನ ದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿತು. ಜಲಾಶಯಕ್ಕಾಗಿ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳಬಾರರು ಎಂದು ಒತ್ತಾಯಿಸಿದ ನಿಯೋಗ, ತಮ್ಮ ಮನೆ ಹಾಗೂ ಕೃಷಿ ಭೂಮಿ ಉಳಿಸಿಕೊಡುವಂತೆ ಮನವಿ ಮಾಡಿತು.

ಜಲಾಶಯದಿಂದ ಏಳು ಗ್ರಾಮಗಳ ಫಲವತ್ತಾದ ಭೂಮಿ, ಮನೆ ಮುಳುಗಡೆಯಾಗುತ್ತವೆ. ಹಾಗಾಗಿ ಜಲಾಶಯ ನಿರ್ಮಿಸಲು ಅವಕಾಶ ನೀಡಬಾರದು. ಯೋಜನೆಯಿಂದ ಪರಿಸರ ಹಾಗೂ ಸಾಂವಿಧಾನಿಕ ನಿಯಮ ಉಲ್ಲಂಘನೆಯಾಗುತ್ತಿವೆ. ಹಾಗಾಗಿ ಯೋಜನೆಗೆ ಅನುಮತಿ ನೀಡದಂತೆ ರಾಜ್ಯಪಾಲರಿಗೆ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ ಎಂದು ನಿಯೋಗ ದಲ್ಲಿದ್ದ ವಕೀಲ ನರಸಿಂಹಗೌಡ ತಿಳಿಸಿದರು.

ADVERTISEMENT

ಎತ್ತಿನಹೊಳೆ ಯೋಜನೆಯಡಿ ಜಲಾಶಯ ನಿರ್ಮಿಸಲು ಎರಡು ಮೂರು ಬಾರಿ ವಿಸ್ತೃತ ವರದಿಗಳನ್ನು(ಡಿಪಿಆರ್) ತಯಾರಿಸುವ ಮೂಲಕ ಯೋಜನೆಯಲ್ಲಿ ಗೊಂದಲ ಮೂಡಿಸಲಾಗಿದೆ. ಲಕ್ಕೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದರೆ ಜಲಾಶಯದಲ್ಲಿ ಶ್ರೀರಾಮನಹಳ್ಳಿ, ದಾಸರಪಾಳ್ಯ, ಶಿಂಗೇನಗಳ್ಳಿ, ಗಾಣದಾಳು, ಹನುಮಂತಯ್ಯನಪಾಳ್ಯ, ನರಸಾಪುರ, ಲಕ್ಕೇನಹಳ್ಳಿ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗುತ್ತವೆ. ಫಲವತ್ತಾದ ಜಮೀನು ನಾಶವಾಗುತ್ತದೆ. ಇದರಿಂದ ಜನರ ಆಹಾರ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದರು.

ಮುಖ್ಯಮಂತ್ರಿಯಿಂದ ವರದಿ ತರಿಸಿ ಕೊಂಡು ಯೋಜನೆ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸೂಚಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. 

ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದರಾಜ‌, ಕೆಂಪಣ್ಣ, ಗ್ರಾಮದ ಮುಖಂಡರಾದ ರಾಜಣ್ಣ, ಸಿದ್ದಲಿಂಗಾಚಾರ್, ಲಕ್ಷ್ಮಮ್ಮ, ಬೈರಣ್ಣ, ಕೆಂಪರಾಜ್, ಲಕ್ಕಣ್ಣ, ರಾಮಾಂಜಿನಪ್ಪ ಸೇರಿದಂತೆ ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಕಡೇಪಾಳ್ಯ, ನರಸಾಪುರ, ಗರುಡಗಲ್ಲು, ಮಚ್ಚೇನಹಳ್ಳಿ, ದಾಸರಪಾಳ್ಯ, ಸಿಂಗೇನಹಳ್ಳಿ, ಶ್ರೀರಾಮನ ಹಳ್ಳಿ, ಸಾಸಲು ಮತ್ತು ವಡೇರಹಳ್ಳಿ ಗ್ರಾಮಸ್ಥರು ನಿಯೋಗದಲ್ಲಿದ್ದರು.

ಪುಸ್ತಕ ರೂಪದ ಮನವಿ

ಎತ್ತಿನಹೊಳೆ ಜಲಾಶಯ ನಿರ್ಮಾದಿಂದ ಮುಳುಗಡೆಯಾಗುತ್ತಿರುವ ಏಳು ಗ್ರಾಮಗಳಲ್ಲಿನ ಕೃಷಿ ಚಟುವಟಿಕೆಗಳ ಸಮಗ್ರ ಚಿತ್ರಗಳು. ಪ್ರಸ್ತುತ ರೈತರ ಜಮೀನುಗಳಲ್ಲಿ ಇರುವ ಅಡಿಕೆ, ತೆಂಗು, ತರಕಾರಿ ಬೆಳೆಗಳ ಜಿ.ಪಿ.ಆರ್.ಎಸ್ ಸಹಿತ ಪೋಟೋಗಳು, ಐತಿಹಾಸಿಕ ಮಹತ್ವದ ಸ್ಥಳಗಳು, ಮುಳುಗಡೆಗೆ ಒಳಗಾಗುತ್ತಿರುವ ಗ್ರಾಮಗಳಲ್ಲಿನ ಕೃಷಿ ಆದಾಯದ ಅಂಕಿ–ಅಂಶ ಸಹಿತ ಮಾಹಿತಿ ಒಳಗೊಂಡ ಪುಸ್ತಕ ರೂಪದ ಮನವಿ ಪತ್ರವನ್ನು ಗ್ರಾಮಸ್ಥರು ರಾಜ್ಯಪಾಲರಿಗೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.