ಪ್ರಾತಿನಿಧಿಕ ಚಿತ್ರ
ದೇವನಹಳ್ಳಿ: ತಾಲ್ಲೂಕಿನಾದ್ಯಂತ ಕಳೆದ ವಾರದಿಂದ ಮಳೆಯಾಗುತ್ತಿದ್ದು, ಬಿತ್ತನೆಗೆ ಅಗತ್ಯ ರಸಗೊಬ್ಬರದ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರಿ ಸೌಮ್ಯದ ಸಹಕಾರಿ ಸಂಘಗಳಲ್ಲಿ ರಸಗೊಬ್ಬರಗಳು ಲಭ್ಯವಾಗುತ್ತಿಲ್ಲ ದಾಸ್ತಾನು ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಬಾರಿ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ವಾಡಿಕೆಯಂತೆ ಆಗಿಲ್ಲ. ಕಳೆದ ಒಂದು ವಾರದಿಂದ ಮಾತ್ರ ಮಳೆ ಸುರಿಯುತ್ತಿದ್ದು, ರೈತರು ಬಿತ್ತನೆಗೆ ಅಣಿಯಾಗಿದ್ದಾರೆ. ಆದರೆ ರಸಗೊಬ್ಬರ ದೊರೆಯದೆ ಇರುವುದರಿಂದ ಬಿತ್ತನೆಗೆ ಅಡ್ಡಿಯಾಗಿದೆ.
‘ಚನ್ನರಾಯಪಟ್ಟಣ ಹೋಬಳಿಗೆ ಕನಿಷ್ಠ 400 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಆದರೆ, ಈ ವರೆಗೂ 40 ಮೆಟ್ರಿಕ್ ಟನ್ ಸಹ ಪೂರೈಕೆ ಆಗಿಲ್ಲ. ಅಗ್ಗದ ದರದಲ್ಲಿ ರಸಗೊಬ್ಬರವನ್ನು ಪಡೆದುಕೊಳ್ಳಲು ರೈತರು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಯಲಿಯೂರು ಗ್ರಾಮದ ರೈತ ಭಾಗ್ಯವಂತ ದೂರಿದರು.
ಅಧಿಕಾರಿಗಳು ಡಿಎಪಿಗೆ ಬದಲಾಗಿ ಕಾಂಪ್ಲೆಕ್ಸ್ ಗೊಬ್ಬರ ಬಳಸುವಂತೆ ಸೂಚಿಸುತ್ತಾರೆ. ಆದರೆ ರೈತರು ಡಿಎಪಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಡಿಎಪಿ ಪೂರೈಕೆ ಹೆಚ್ಚಿಸಬೇಕೆಂದು ಭಾರತೀಯ ಕಿಸಾನ್ ಸಂಘದ ಮುಖಂಡ ರೈತ ಮಂಜುನಾಥ್ ಒತ್ತಾಯಿಸಿದ್ದಾರೆ.
ಕಸಬಾ ಹೋಬಳಿಯಲ್ಲಿ ಕೃಷಿ ಜಮೀನು ಬಹುತೇಕ ಕೃಷಿಯೇತರ ವಸತಿ ಉಪಯೋಗಕ್ಕೆ ಬದಲಾಗಿದ್ದು, ಕೃಷಿ ಮಾಡುವವರ ಸಂಖ್ಯೆಯೂ ಕ್ಷಿಣಿಸುತ್ತಿದೆ. ಚನ್ನರಾಯಪಟ್ಟಣ, ವಿಜಯಪುರ, ಕುಂದಾಣ ಹೋಬಳಿಗಳಲ್ಲಿ ಮಾತ್ರವೇ ಕೃಷಿ ಚಟುವಟಿಕೆಗಳು ಕಂಡು ಬರುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.