ADVERTISEMENT

ದೇವನಹಳ್ಳಿ | ಪಂಚ ಗ್ಯಾರಂಟಿಯಿಂದ ಅಭಿವೃದ್ಧಿಗೆ ಧಕ್ಕೆ ಇಲ್ಲ: ದಿನೇಶ್‌ ಗೂಳಿಗೌಡ

ಇದುವರೆಗೆ ₹98 ಸಾವಿರ ಕೋಟಿ ಹಣ ವ್ಯಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 2:10 IST
Last Updated 19 ಸೆಪ್ಟೆಂಬರ್ 2025, 2:10 IST
ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಉದ್ಘಾಟಿಸಿದರು.
ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಉದ್ಘಾಟಿಸಿದರು.   

ದೇವನಹಳ್ಳಿ: ಪಂಚ ಗ್ಯಾರಂಟಿಗಾಗಿ ರಾಜ್ಯ ಸರ್ಕಾರ ಇದುವರೆಗೆ ₹98 ಸಾವಿರ ಕೋಟಿ ಹಣ ವ್ಯಯ ಮಾಡಿದೆ ಇದರ ನಡುವೆ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗದಂತೆ ಆಡಳಿತ ನೀಡುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.

ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀಡಿದ್ದ ವಾಗ್ದಾನದಂತೆ ಪಂಚಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ. ಕಳೆದ 21 ತಿಂಗಳಲ್ಲಿ ಪಂಚಗ್ಯಾರಂಟಿ ಯೋಜನೆಗಳಿಗಾಗಿ ₹98 ಸಾವಿರ ಕೋಟಿ ಹಣ ವ್ಯಯ ಮಾಡಲಾಗಿದೆ.

ADVERTISEMENT

ಗೃಹಲಕ್ಷ್ಮಿ ಯೋಜನೆಯಡಿ ₹1.24 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ನೀಡಲಾಗುತ್ತಿದ್ದು, ಇದುವರೆಗೆ ₹52 ಸಾವಿರ ಕೋಟಿ, ಗೃಹಜ್ಯೋತಿ ಯೋಜನೆಯಡಿ ₹1.64 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ₹18,139 ಕೋಟಿ ಹಣವನ್ನು ರಾಜ್ಯ ಸರ್ಕಾರ ವ್ಯಯಿಸಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಡಿ 544 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇದಕ್ಕಾಗಿ ₹14,0268 ಕೋಟಿ ಹಣ ಸಾರಿಗೆ ನಿಗಮಗಳಿಗೆ ಸರ್ಕಾರ ಪಾವತಿಸಿದೆ. ಅನ್ನಭಾಗ್ಯ ಯೋಜನೆಯಡಿ ₹4.5 ಕೋಟಿ ಕುಟುಂಬದ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಿಸುತ್ತಿದ್ದರೆ ಯುವನಿಧಿ ಯೋಜನೆಯಡಿ ₹ 2.55 ಲಕ್ಷ ಯುವಕರಿಗೆ ₹ 623 ಕೋಟಿ ಹಣ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿಯಪ್ಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷ ಸೂರಜ್ ಹೆಗ್ಗಡೆ, ಶಾಸಕ ಶರತ್ ಬಚ್ಚೇಗೌಡ, ವಿಧಾನಪರಿಷತ್ ಸದಸ್ಯರಾದ ರವಿ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಅನುರಾಧಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ ಭಾಗವಹಿಸಿದ್ದರು.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಮಹಿಳೆಯರಲ್ಲಿ ಪಂಚ ಗ್ಯಾರಂಟಿಗಳು ಶಕ್ತಿ ತುಂಬಿದವು.
ದಿನೇಶ್ ಗೂಳಿಗೌಡ ಉಪಾಧ್ಯಕ್ಷ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ

ರಾಜ್ಯ ಸರ್ಕಾರ ದಿವಾಳಿ ಆಗಿಲ್ಲ

ಗ್ಯಾರಂಟಿಗಳಿಗಾಗಿ ಇಷ್ಟೊಂದು ಪ್ರಮಾಣದಲ್ಲಿ ಹಣ ವ್ಯಯಿಸಿದರೂ ಸಹ ರಾಜ್ಯ ಸರ್ಕಾರ ದಿವಾಳಿ ಆಗಿಲ್ಲ. ₹4 ಲಕ್ಷ ಕೋಟಿ ಬಜೆಟ್ ಗಾತ್ರವಿದ್ದು ಇದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹51 ಸಾವಿರ ಕೋಟಿ ಮೀಸಲಿಡಲಾಗಿದೆ. ಸರ್ಕಾರಿ ನೌಕರರ ವೇತನಕ್ಕೆ ₹1.20 ಲಕ್ಷ ಕೋಟಿ ಪಿಂಚಣಿ ಮಾಸಾಶನಕ್ಕಾಗಿ ₹1.12 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದರ ಜೊತೆಗೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನವನ್ನೂ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಹೀಗಿರುವಾಗ ಸರ್ಕಾರ ಹೇಗೆ ದಿವಾಳಿಯಾಗಲು ಸಾಧ್ಯ? ಟೀಕಿಸುವವರ ಟೀಕೆಗೆ ಕಿವಿಕೊಡದೇ ದನಿ ಇಲ್ಲದವರಿಗೆ ದನಿಯಾಗಿರುವ ಕಾಂಗ್ರೆಸ್ ಸರ್ಕಾರದ ಪರ ಮಹಿಳೆಯರು ದನಿ ಎತ್ತಬೇಕು ಎಂದು ದಿನೇಶ್ ಗೂಳಿಗೌಡ ಹೇಳಿದರು. 

ಗ್ಯಾರಂಟಿಯಿಂದ ನೆಮ್ಮದಿ ಬದುಕು: ಕೆ. ಎಚ್‌.ಮುನಿಯಪ್ಪ

ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾದನಂತರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಎಲ್ಲರೂ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಪಂಚ ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದವರಿಗೂ ಸಿಗುತ್ತಿದೆ. ₹500 ಕೋಟಿಗೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗಪಡಿಸಿಕೊಂಡಿದ್ದಾರೆ. ಪಂಚಗ್ಯಾರಂಟಿ ಯೋಜನೆಯಿಂದ ವ್ಯಾಪಾರ ವಹಿವಾಟು ತೆರಿಗೆ ಸಂಗ್ರಹ ಹೆಚ್ಚಾಗಿದ್ದು ತಲಾದಾಯ ಹೆಚ್ಚಾಗಿದೆ ಎಂದು ತಿಳಿಸಿದರು. ಪಂಚ ಗ್ಯಾರಂಟಿ ಯೋಜನೆಗಳು ಬಡವರ ಶೋಷಿತರ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಕೊಡುಗೆ. ಜನರ ಜೀವನ ಮಟ್ಟ ಸುಧಾರಿಸಿದೆ. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ಮೂಲ ಸೌಕರ್ಯಗಳು ರಸ್ತೆಯ ಅಭಿವೃದ್ಧಿ ವಿವಿಧ ಜನಪರ ಅಭಿವೃದ್ಧಿಗಳನ್ನು ಕೈಗೊಳ್ಳುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.