ADVERTISEMENT

ವಿಜೃಂಭಣೆಯ ಹೂವಿನ ಕರಗ ಮಹೋತ್ಸವ 

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 13:54 IST
Last Updated 27 ಏಪ್ರಿಲ್ 2019, 13:54 IST
ವಿಜಯಪುರ ಹೋಬಳಿ ಸಮೀಪದ ಮೇಲೂರು ಗ್ರಾಮದ ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನ ಕರಗ ಮಹೋತ್ಸವದಲ್ಲಿ ಕರಗದ ಪೂಜಾರಿ ಲಕ್ಕೂರು ಉಮೇಶ್ ಅವರು ವೀರಕುಮಾರರೊಂದಿಗೆ ಪೂಜೆ ಸ್ವೀಕರಿಸಲು ಹೊರಟರು
ವಿಜಯಪುರ ಹೋಬಳಿ ಸಮೀಪದ ಮೇಲೂರು ಗ್ರಾಮದ ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನ ಕರಗ ಮಹೋತ್ಸವದಲ್ಲಿ ಕರಗದ ಪೂಜಾರಿ ಲಕ್ಕೂರು ಉಮೇಶ್ ಅವರು ವೀರಕುಮಾರರೊಂದಿಗೆ ಪೂಜೆ ಸ್ವೀಕರಿಸಲು ಹೊರಟರು   

ವಿಜಯಪುರ: ಧರ್ಮರಾಯಸ್ವಾಮಿ ದ್ರೌಪತಮ್ಮನವರ ಹೂವಿನ ಕರಗ ಮಹೋತ್ಸವ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಹೋಬಳಿ ಸಮೀಪದ ಮೇಲೂರು ಗ್ರಾಮದಲ್ಲಿ 31 ನೇ ವರ್ಷದ ಹೂವಿನ ಕರಗ ಮಹೋತ್ಸವಕ್ಕೆ ಸುತ್ತಲಿನಿಂದ ಬಂದಿದ್ದ ಭಕ್ತರು ಸಾಕ್ಷಿಯಾದರು.

ಕರಗ ಮಹೋತ್ಸವದ ಅಂಗವಾಗಿ ಗ್ರಾಮದ ಧರ್ಮರಾಯಸ್ವಾಮಿ ದೇವಾಲಯವೂ ಸೇರಿದಂತೆ ಗಂಗಾತಾಯಿ ದೇವಾಲಯ, ಉಮಾಮಹೇಶ್ವರಸ್ವಾಮಿ ದೇವಾಲಯಗಳು, ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬುಧವಾರ ಹಸಿಕರಗ ಮಹೋತ್ಸವ ನಡೆದಿತ್ತು. ಶುಕ್ರವಾರ ನಡೆದ ಹೂವಿನ ಕರಗ ಮಹೋತ್ಸವದ ಅಂಗವಾಗಿ ವಾದ್ಯಗೋಷ್ಠಿಯನ್ನು ಆಯೋಜನೆ ಮಾಡಿದ್ದರು.

ರಾತ್ರಿ 12 ಗಂಟೆಗೆ ಕರಗದ ಪೂಜಾರಿ ಲಕ್ಕೂರಿನ ಉಮೇಶ್ ಅವರು, ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗವನ್ನು ಹೊತ್ತು ವೀರಕುಮಾರರೊಂದಿಗೆ ಸಾಗಿ ಬಂದು ಸರ್ಕಾರಿ ಶಾಲೆಯ ಮೈದಾನದಲ್ಲಿ ಸೇರಿದ್ದ ಜನಸಮೂಹದ ನಡುವೆ ವಾದ್ಯಗೋಷ್ಠಿಯವರು ನುಡಿಸಿದ ವಿವಿಧ ಹಾಡುಗಳು, ತಮಟೆ ವಾದನಗಳು, ಮಂಗಳ ವಾದ್ಯಗಳ ತಾಳಕ್ಕೆ ನರ್ತಿಸುವ ಮೂಲಕ ಸೇರಿದ್ದವರನ್ನು ರಂಜಿಸಿದರು.

ADVERTISEMENT

ಕೆಂಪು ವಸ್ತ್ರಗಳನ್ನು ಧರಿಸಿಕೊಂಡಿದ್ದ ವೀರಕುಮಾರರು, ಕೈಗಳಲ್ಲಿ ಕತ್ತಿಗಳನ್ನು ಹಿಡಿದುಕೊಂಡು ಡೀ.ಡಿಕ್ ಎಂದು ಎದೆಗೆ ಬಡಿದುಕೊಳ್ಳುತ್ತಾ ಅಲಗು ಸೇವೆ ನಡೆಸಿಕೊಟ್ಟರು. ವೀರಕುಮಾರರು ಗೋವಿಂದಾ.. ಗೋವಿಂದಾ..ಎನ್ನುತ್ತಾ ಕರಗವನ್ನು ಹಿಂಬಾಲಿಸಿದರು. ಗ್ರಾಮದ ಪ್ರಮುಖ ಬೀದಿಗಳಿಗೆ ತೆರಳಿದ ಕರಗಕ್ಕೆ ಜನರು ರಸ್ತೆಗಳಲ್ಲಿ ನೀರು ಹಾಕಿ ರಂಗೋಲೆ ಬಿಡಿಸಿ, ಭಕ್ತಿಯಿಂದ ಪೂಜೆ ಸಲ್ಲಿಸಿದರು. ಮಲ್ಲಿಗೆ ಹೂಗಳನ್ನು ಕರಗಕ್ಕೆ ಎರಚಿ ನಮಸ್ಕರಿಸಿದರು.

ಬೆಳಿಗ್ಗೆ 11.30 ರ ಸುಮಾರಿಗೆ ಪುನಃ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಾಪಸ್‌ ಬಂದ ಕರಗ ಅಗ್ನಿಕುಂಡವನ್ನು ಹಾದು ಹೋಗುವ ಮೂಲಕ ಇಳಿಸಿದರು. ಕರಗ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.