ADVERTISEMENT

ಪಿತೃಪಕ್ಷ ಆರಂಭ | ಹೂ ಬೆಲೆ ಕುಸಿತ: ಕಂಗಲಾದ ಹೂ ಬೆಳೆಗಾರರು

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 15 ಸೆಪ್ಟೆಂಬರ್ 2025, 1:54 IST
Last Updated 15 ಸೆಪ್ಟೆಂಬರ್ 2025, 1:54 IST
ವಿಜಯಪುರ ಪಟ್ಟಣ ಸಮೀಪ ಕೊಮ್ಮಸಂದ್ರ ಗ್ರಾಮದಲ್ಲಿ ರೈತನೊರ್ವ ಸೇವಂತಿ ಬೆಳೆದಿರುವುದು.
ವಿಜಯಪುರ ಪಟ್ಟಣ ಸಮೀಪ ಕೊಮ್ಮಸಂದ್ರ ಗ್ರಾಮದಲ್ಲಿ ರೈತನೊರ್ವ ಸೇವಂತಿ ಬೆಳೆದಿರುವುದು.   

ವಿಜಯಪುರ (ದೇವನಹಳ್ಳಿ): ವರಮಹಾಲಕ್ಷ್ಮಿ, ಗೌರಿ ಗಣೇಶ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಬಲು ದುಬಾರಿಯಾಗಿದ್ದ ಹೂವಿನ ಬೆಲೆ ಪಿತೃಪಕ್ಷ ಆರಂಭದ ಬಳಿಕ ಕುಸಿದಿದ್ದು, ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸೆ.7ರಿಂದ ಪಿತೃ ಪಕ್ಷ ಆರಂಭಗೊಂಡಿದೆ. ಈ ಸಮಯದಲ್ಲಿ ಮದುವೆ, ನಾಮಕಾರಣ, ಗೃಹಪ್ರವೇಶ ಇತರೆ ಶುಭ ಕಾರ್ಯಗಳು ಹೆಚ್ಚು ನಡೆಯುವುದಿಲ್ಲ. ಹೀಗಾಗಿ ಸ್ಥಳೀಯವಾಗಿ ಬೆಳೆದ ಹೂವಿಗೆ ಬೇಡಿಕೆ ಕಡಿಮೆ ಆಗಿರುವುದರಿಂದ ಬೆಲೆ ಕುಸಿದಿದೆ.

ನೆರೆಯ ರಾಜ್ಯ, ಜಿಲ್ಲೆಗಳಲ್ಲಿಯೂ ಹೂವಿಗೆ ಸೂಕ್ತ ಬೇಡಿಕೆಯೂ ಸಹ ಇಲ್ಲದಿರುವುದರಿಂದ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಹೂವು ರಫ್ತು ಆಗುತ್ತಿಲ್ಲ. ಇದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ADVERTISEMENT

ಕಳೆದ ವಾರದ ಹಿಂದೆಯಷ್ಟೇ ಗಗನ ಕುಸುಮವಾಗಿದ್ದ ಹೂವಿನ ಬೆಲೆ ಈಗ ಪಾತಾಳ ಸೇರಿದೆ. ಸದ್ಯ ಮಾರುಕಟ್ಟೆಯಲ್ಲಿ ಹೂವಿನ ದರವು ಗಣನೀಯ ಕುಸಿತ ಆಗಿರುವುದು ದೇವರ ಮುಡಿಗೆ ಸೇರಬೇಕಾದ ಹೂ ತಿಪ್ಪೆಯ ಪಾಲಾಗುತ್ತಿದೆ. ತೋಟದಲ್ಲಿ ಹೂ ಕಿತ್ತ ಕೂಲಿ ಹಣವು ಕೈಗೆ ಸಿಗದೆ ರೈತರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ.

ಹೂಗಿಂತ ಬ್ಯಾಗ್ ಬೆಲೆ ದುಬಾರಿ: ಈಗ ಹೂವಿಗಿಂತ ಅದನ್ನು ಸಾಗಿಸಲು ಬಳಸುವ ಬ್ಯಾಗ್ ಬೆಲೆಯೇ ದುಬಾರಿಯಾಗಿರುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಪ್ರತಿ ಕೆ.ಜಿಗೆ ನೂರಾರು ರೂಗಳಿಗೆ ಮಾರಾಟವಾಗುತ್ತಿದ್ದ ಗುಲಾಬಿ ಹೂ ಈಗ ಕೇವಲ ₹20 ರಿಂದ ₹30 ಆಸುಪಾಸಿದೆ. ಹೂ ತುಂಬುವ ಬ್ಯಾಗ್ ಬೆಲೆಯೇ ₹20 ಇದೆ.

ಇನ್ನೂ ಸೇವಂತಿಗೆ ₹20 ರಿಂದ ₹30 ಮಾರಾಟವಾದರೆ, ಚೆಂಡು ಹೂ ₹5ಗೆ ಸಿಗುತ್ತಿದೆ. 30 ಕೆ.ಜಿಯ ಸೇವಂತಿ, ಚೆಂಡೂ ಹೂವಿನ ಬ್ಯಾಗ್ ಕೇವಲ ₹20-30ಗೆ ಬಿಕರಿಯಾಗುತ್ತಿದೆ. ಇದರಿಂದ ಲಕ್ಷಾಂತರ ರೂ ವ್ಯಯಿಸಿ ಹೂವು ಬೆಳೆದ ರೈತರಿಗೆ ಪಿತೃ ಪಕ್ಷದ ಆರಂಭ ಭಾರೀ ಹೊಡೆತ ನೀಡಿದೆ.

ಪಿತೃ ಪಕ್ಷ ಆರಂಭದ ನಂತರ ಶುಭ ಸಮಾರಂಭಗಳು ನಡೆಯದ ಕಾರಣ ಹೂ ಬೇಡಿಕೆ ಕಡಿಮೆಯಾಗಿದೆ. ಬರುವ ಅಮಾವಾಸ್ಯೆ ನಂತರ ಹೂವಿಗೆ ಬೇಡಿಕೆ ಬರಲಿದೆ. ಮತ್ತೆ ನವರಾತ್ರಿ ಹಬ್ಬ ಶುರುವಾದರೆ ಹೂವಿನ ದರ ಉತ್ತಮವಾಗಿರಲಿದೆ.
ಮಂಜುನಾಥ್, ಹೂವಿನ ವ್ಯಾಪಾರಿ
ಎರಡು ಎಕರೆ ಜಮೀನಿಗೆ ಸೇವಂತಿ ಹೂ ಬೆಳೆದಿದ್ದೇವೆ. ಬೆಳೆಗೆ ಲಕ್ಷಾಂತರ ಬಂಡವಾಳ ಹೂಡಿದ್ದೇನೆ. ಈಗ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಭಾರೀ ಕುಸಿತವಾಗಿದೆ. ಹೂ ಬಿಡಿಸಿದ ಕೂಲಿ ಹಣವೂ ಕೈಗೆ ಸಿಗುತ್ತಿಲ್ಲ. ಹೆಚ್ಚು ನಷ್ಟವಾಗಿದೆ.
ಕೇಶವಣ್ಣ ಧರ್ಮಪುರ, ಹೂ ಬೆಳೆಗಾರ
ವಿಜಯಪುರ ಟೌನ್‍ನಲ್ಲಿ ಹೂ ಮಾರಾಟ ಮಾಡುತ್ತಿರುವ ಮಹಿಳೆ
ಹೂ ಕೀಳಲು ಹಿಂದೇಟು
ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿತ ಕಂಡಿರುವುದರಿಂದ ರೈತರು ತೋಟಗಳಲ್ಲಿ ಹೂ ಬಿಡಿಸಲು ಮುಂದಾಗುತ್ತಿಲ್ಲ. ಹೂ ಬಿಡಿಸಿದ ಕೂಲಿ ಸಾಗಾಟದ ಖರ್ಚು ಔಷಧ ರಸಗೊಬ್ಬರಕ್ಕೂ ಹಣ ಬಾರದೇ ಇರುವುದರಿಂದ ರೈತರು ತೋಟದಲ್ಲಿನ ಹೂವು ಕೀಳಲು ಹಿಂದೇಟು ಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.