ಹೊಸಕೋಟೆ: ಗಣೇಶ ಹಬ್ಬದ ಹಿನ್ನೆಯಲ್ಲಿ ನಗರದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿವೆ. ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವರ ಮುಖದಲ್ಲಿ ಮಾತ್ರ ಸಂತೋಷ ಕಾಣುತ್ತಿಲ್ಲ.
ನಗರದ ಎಲ್ಲೆಂದರಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ಸೂಚನೆ ಕೊಟ್ಟಿದೆ. ಹಾಗಾಗಿ ಬೀದಿಬದಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದವರು ಇದರಿಂದ ಅವಕಾಶ ವಂಚಿತರಾಗಿದ್ದಾರೆ.
ಅಂಗಡಿಗಳಲ್ಲಿ ಮಾತ್ರ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಗಣೇಶ ಮೂರ್ತಿಗಳನ್ನು ನಗರದ ಎಲ್ಲಿ ಮಾರಾಟ ಮಾಡಬೇಕು ಎಂಬ ಬಗ್ಗೆ ಸೋಮವಾರದವರೆಗೂ ತಾಲ್ಲೂಕು ಅಡಳಿತ ಇಲ್ಲವೇ ನಗರಸಭೆ ಸ್ಪಷ್ಟ ಮಾಹಿತಿ ನೀಡಿರಲಿಲ್ಲ.
ಹೂ ಮಂಡಿ ಸರ್ಕಲ್ ಬಳಿಯ ಮೈದಾನದಲ್ಲೂ ಹೂ ಹಣ್ಣು, ಬಾಳೆ ದಿಂಡು, ಮೊದಲಾದ ಪೂಜಾ ಸಾಮಗ್ರಿಗಳ ಮಾರಾಟಕ್ಕೆ ನಗರಸಭೆ ಅವಕಾಶ ಕಲ್ಪಿಸಿತ್ತು. ಆದರೆ, ಅಲ್ಲಿಯೂ ಗ್ರಾಹಕರಿಲ್ಲದೆ ಅಂಗಡಿಗಳು ಬಿಕೋ ಎನ್ನುತ್ತಿದ್ದವು.
ಏಕಾಏಕಿ ಪೊಲೀಸ್ ಸ್ಟೇಷನ್ ಹತ್ತಿರ ಬಸ್ ಸ್ಟಾಪ್ ಬಳಿ ಇರುವ ಖಾಲಿ ಮೈದಾನದಲ್ಲಿ 20 ರಿಂದ 25 ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ನಷ್ಟವಾಗುತ್ತಿದೆ ಎಂದು ಅಂಗಡಿ ಮಾಲೀಕರು ಆಕ್ರೋಶ ಹೊರಹಾಕಿದರು.
ಜನರಿಗೆ ಸರಿಯಾದ ಮಹಿತಿ ಇಲ್ಲದ ಕಾರಣ ಜನರು ಬೇರೆ ಊರುಗಳಿಂದ ಮೂರ್ತಿಗಳನ್ನು ತಂದಿದ್ದಾರೆ. ಜೊತೆಗೆ ಪೊಲೀಸ್ ಸ್ಟೇಷನ್ ಬಳಿ ಗಣೇಶ ವಿಗ್ರಹಗಳ ಮಳಿಗೆ ಇವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಹಿಂದಿನ ವರ್ಷದಷ್ಟು ವ್ಯಾಪಾರ ಆಗುತ್ತಿಲ್ಲ ಎಂದು ವರ್ತಕರು ಅಳಲು ತೋಡಿಕೊಂಡರು.
ಹೊಸಕೋಟೆಯಿಂದ 5 ಕಿಮೀ ದೂರದ ಭಕ್ತರಹಳ್ಳಿಯಲ್ಲಿ ವರ್ಷ ಪೂರ್ತಿ ವಿಗ್ರಹ ತಯಾರಿಸಿ ಮಾರುವುದೇ ನಮ್ಮ ವೃತ್ತಿ. ಈ ವರ್ಷವೂ ಗಣೇಶ ಹಬ್ಬಕ್ಕೆಂದು ಲಕ್ಷಾಂತರ ರೂಪಾಯಿ ಹಣ ಖರ್ಚುಮಾಡಿ ಗಣೇಶನ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡಲು ತಯಾರಿ ನಡೆಸಿದ್ದೆವು. ಹಬ್ಬ ಇನ್ನೆರಡು ದಿನ ಇದೆ ಎನ್ನುವಾಗ ತಾಲ್ಲೂಕು ಆಡಳಿತ ಮತ್ತು ನಗರಸಭೆ ಜಾಗ ಕೊಟ್ಟರೆ ಹೇಗೆ? ಗಣೇಶ ಮೂರ್ತಿಗಳನ್ನು ಯಾರು ಕೊಳ್ಳುತ್ತಾರೆ? ನಮಗೆ ಆಗುತ್ತಿರುವ ನಷ್ಟವನ್ನು ಯಾರು ತುಂಬಿಕೊಡುತ್ತಾರೆ ಎಂದು ಭಕ್ತರಹಳ್ಳಿಯ ವರ್ತಕ ಬಿ ಜೆ ಶ್ರೀನಿವಾಸ ಮೂರ್ತಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.