ADVERTISEMENT

ಗಣೇಶ ಹಬ್ಬದ: ಇರಲಿ ಮಣ್ಣಿನ ಮೂರ್ತಿ, ಪರಿಸರ ಕಾಳಜಿ

ಪ್ರತಿಷ್ಠಾಪನೆಗೂ ಮುನ್ನ ನಗರಸಭೆ, ಪೊಲೀಸ್‌ ಇಲಾಖೆ, ಬೆಸ್ಕಾಂ ಅನುಮತಿ ಕಡ್ಡಾಯ

ನಟರಾಜ ನಾಗಸಂದ್ರ
Published 30 ಆಗಸ್ಟ್ 2019, 19:30 IST
Last Updated 30 ಆಗಸ್ಟ್ 2019, 19:30 IST
ಡಿ.ಕ್ರಾಸ್‌ ರಸ್ತೆಯ ನಾಗರಕೆರೆ ಅಂಚಿನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಸಿದ್ಧಪಡಿಸಲಾಗಿರುವ ಕುಂಟೆ
ಡಿ.ಕ್ರಾಸ್‌ ರಸ್ತೆಯ ನಾಗರಕೆರೆ ಅಂಚಿನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಸಿದ್ಧಪಡಿಸಲಾಗಿರುವ ಕುಂಟೆ   

ದೊಡ್ಡಬಳ್ಳಾಪುರ: ಗಣೇಶ ಹಬ್ಬ ಸಂಭ್ರಮ, ಪರಿಸರ ಸ್ನೇಹಿ ಹಾಗೂ ಶಾಂತಿಯುತವಾಗಿ ಆಚರಿಸಲು ನಗರಸಭೆ, ಬೆಸ್ಕಾಂ, ಪೊಲೀಸ್‌ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳು ಸಕಲ ಸಿದ್ದತೆ ಮಾಡಿಕೊಂಡಿವೆ.

‘ಸೆ. 2ರಂದು ನಡೆಯಲಿರುವ ಗಣೇಶ ಹಬ್ಬದ ಅಂಗವಾಗಿ ನಗರದಲ್ಲಿ ವಿವಿಧ ಮಂಡಳಿಗಳು ಹಾಗೂ ಸಾರ್ವಜನಿಕರು ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಡಿ.ಕ್ರಾಸ್‌ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಸಮೀಪದ ನಾಗರಕೆರೆ ಅಂಚಿನಲ್ಲಿ ಕುಂಟೆ ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಕುಂಟೆ ಒಳಗೆ ಇಳಿದು ಗಣೇಶ ಮೂರ್ತಿಯನ್ನು ವಿಸರ್ಜಿಸಲು ಅನುಕೂಲವಾಗುವ ರೀತಿಯಲ್ಲಿ ಮೆಟ್ಟಿಲು ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಯಾವುದೇ ರೀತಿಯ ಅಪಾಯ ಸಂಭವಿಸದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ತಿಳಿಸಿದ್ದಾರೆ.

‘ಗಣೇಶ ಮೂರ್ತಿ ಪ್ರತಿಷ್ಟಾಪಿಸುವ ಎಲ್ಲ ಮಂಡಳಿಗಳ ಮುಖಂಡರ ಸಭೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗಿದೆ. ಪಿಒಪಿ ಗಣೇಶ ಮೂರ್ತಿ ಸೇರಿದಂತೆ ನೀರಿನಲ್ಲಿ ಸುಲಭವಾಗಿ ಕರಗದೇ ಇರುವ ಮೂರ್ತಿಗಳನ್ನು ಪ್ರತಿಷ್ಟಾಪಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಈಗಾಗಲೇ ತಿಳಿಸಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಹೂವು, ಬಾಳೆ ದಿಂಡುಗಳನ್ನು ಕೆರೆಯ ಅಂಗಳದಲ್ಲಿ ಎಲ್ಲೆಂದರಲ್ಲಿ ಎಸೆಯದೆ, ನಗರಸಭೆ ವತಿಯಿಂದ ಗುರುತಿಸಿರುವ ಸ್ಥಳದಲ್ಲೇ ಹಾಕುವ ಮೂಲಕ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಬೆಸ್ಕಾಂ ಅನುಮತಿ ಕಡ್ಡಾಯ: ‘ನಗರ ಸೇರಿದಂತೆ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸ್ಥಳೀಯ ಸಂಸ್ಥೆ, ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯುವ ಹಾಗೆ ಬೆಸ್ಕಾಂ ವತಿಯಿಂದಲೂ ಕಡ್ಡಾಯವಾಗಿ ಶುಲ್ಕ ಪಾವತಿಸಿ, ಅನುಮತಿ ಪಡೆಯಬೇಕು’ ಎಂದು ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್‌ ಸುಂದರೇಶ್‌ ನಾಯ್ಕ್‌ ತಿಳಿಸಿದರು.

ಪರಿಸರ ಸ್ನೇಹಿ ಗಣೇಶ ಕಾರ್ಯಾಗಾರ: ಗಣೇಶ ಹಬ್ಬ ಸಡಗರ, ಸಂಭ್ರಮದ ಆಚರಣೆಯಾಗಿದೆ. ಕಾಲೇಜುಗಳಿಂದ ಮೊದಲುಗೊಂಡು ಐಟಿ ಉದ್ಯೋಗಿಗಳವರೆಗೆ, ಹಟ್ಟಿಗಳಿಂದ ಅರಮನೆ ಅಂಗಳದವರೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ಬಣ್ಣ ಬಣ್ಣದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯ ಬೆಳೆದಿದೆ. ಅಂತೆಯೇ ಪರಿಸರಪ್ರಿಯ ಕೆಲ ಯುವ ಗುಂಪುಗಳು ಪರಿಸರ ಹಾಗೂ ಜಲಚರಗಳನ್ನು ಉಳಿಸುವ ನಿಟ್ಟಿನಲ್ಲಿ ಬಣ್ಣ ರಹಿತ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಹಬ್ಬ ಆಚರಿಸಲು ಮುಂದಾಗಿವೆ.

ಈ ಉದ್ದೇಶದಿಂದ ಮಕ್ಕಳಿಂದ, ಯುವಕರವರೆಗೆ ಎಲ್ಲರನ್ನು ಒಂದೆಡೆ ಸೇರಿಸಿ, ಮಣ್ಣಿನಲ್ಲಿ ಗಣೇಶ ಮೂರ್ತಿಗಳನ್ನು ತಾವೇ ತಯಾರಿಸುವ ಕಾರ್ಯಾಗಾರವನ್ನು ಬೆಸೆಂಟ್‌ ಪಾರ್ಕ್‌ನಲ್ಲಿ ನಡೆಸಲಾಗಿದೆ. ಹಬ್ಬ ಒಂದು ವಾರ ಮುಂದೆ ಇರುವಂತೆಯೇ ಸುಚೇತನ ಎಜುಕೇಷನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌, ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರಿನ ರೋಟರಾಕ್ಟ್‌ ಕ್ಲಬ್‌ ಆಫ್‌ ವಿದ್ಯಾರಣ್ಯಪುರ ಇವರು ನುರಿತ ಕಲಾವಿದರಿಂದ ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸುವುದನ್ನು ಕಲಿಸಿದರು. ಅಲ್ಲದೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರು ತಯಾರಿಸಿರುವ ಗಣೇಶ ಮೂರ್ತಿಗಳನ್ನೇ ಹಬ್ಬದಂದು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿ ಸೆಲ್ಫಿ ಕಳುಹಿಸಿಕೊಟ್ಟರೆ ಎಲ್ಲರಿಗೂ ಬಹುಮಾನ ನೀಡುವುದಾಗಿ ಸಂಘಟಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.