ADVERTISEMENT

ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ: ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:35 IST
Last Updated 9 ಜನವರಿ 2020, 14:35 IST
ಪೂರ್ವಭಾವಿ ಸಭೆಯಲ್ಲಿ ಅಂಜುಂ ಪರ್ವೇಜ್ ಹಾಗೂ ಪಿ.ಎನ್.ರವೀಂದ್ರ ಪಾಲ್ಗೊಂಡಿದ್ದರು
ಪೂರ್ವಭಾವಿ ಸಭೆಯಲ್ಲಿ ಅಂಜುಂ ಪರ್ವೇಜ್ ಹಾಗೂ ಪಿ.ಎನ್.ರವೀಂದ್ರ ಪಾಲ್ಗೊಂಡಿದ್ದರು   

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯಲ್ಲಿ ಕಂಡು ಬಂದಿರುವ ಲಿಂಗಾನುಪಾತ ವ್ಯತ್ಯಾಸ ಸರಿಪಡಿಸಿಕೊಳ್ಳಲು ತಹಶೀಲ್ದಾರ್‌ಗಳು ಕ್ರಮವಹಿಸಬೇಕು ಎಂದು ಪೌರಾಡಳಿತ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ತಿಳಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2011ರ ಜನಗಣತಿ ಅನುಸಾರ ಲಿಂಗಾನುಪಾತ 946 ಇರಬೇಕಾಗಿದೆ. ಕರಡು ಮತದಾರರ ಪಟ್ಟಿಯಂತೆ ನೆಲಮಂಗಲ ತಾಲ್ಲೂಕಿನಲ್ಲಿ 1000, ದೇವನಹಳ್ಳಿ ತಾಲ್ಲೂಕಿನಲ್ಲಿ 986, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 995 ಹಾಗೂ ಹೊಸಕೋಟೆ ತಾಲ್ಲೂಕಿನಲ್ಲಿ 986 ಲಿಂಗಾನುಪಾತ ಇದೆ. ಈ ವ್ಯತ್ಯಾಸ ಶೀಘ್ರ ಸರಿಪಡಿಸುವಂತೆ ಸೂಚನೆ ನೀಡಿದರು.

ಮಿಂಚಿನ ನೋಂದಣಿ ವಿಶೇಷ ಅಭಿಯಾನದಲ್ಲಿ ಜ7ರೊಳಗೆ 413 ಅರ್ಜಿಗಳು ಮಾತ್ರ ಸ್ವೀಕಾರವಾಗಿವೆ. ಮಿಂಚಿನ ನೋಂದಣಿ ಕಾರ್ಯ ಜ.10ರವರೆಗೆ ವಿಸ್ತರಣೆ ಮಾಡಿರುವುದರಿಂದ ಮತ್ತಷ್ಟು ಯುವ ಮತದಾರರನ್ನು ಪಟ್ಟಿಗೆ ಸೇರಿಸಲು ಅನುಕೂಲವಾಗಲಿದೆ. ಈನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ADVERTISEMENT

2020 ಯೋಜಿತ ಜನಸಂಖ್ಯೆ ಅನುಸಾರ ಪ್ರತಿವರ್ಷ ಮತದಾರರ ಪಟ್ಟಿಗೆ ಶೇ1ರಷ್ಟು ಹೊಸ ಮತದಾರರ ಸೇರ್ಪಡೆ ಹಾಗೂ ಶೇ 0.5ರಷ್ಟು ಮತದಾರರ ಪಟ್ಟಿಯಲ್ಲಿ ಮೃತ ಹಾಗೂ ಇತರೆ ಕಾರಣಗಳಿಂದ ಇಳಿಕೆ ಆಗಬೇಕಾಗಿದೆ. ಈ ಸಂಬಂಧ ತಹಶೀಲ್ದಾರ್‌ಗಳು ಕ್ರಮವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್, ಉಪವಿಭಾಗಾಧಿಕಾರಿ ಮಂಜುನಾಥ್, ಎಲ್ಲ ತಾಲ್ಲೂಕಿನ ತಹಶೀಲ್ದಾರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.