ADVERTISEMENT

ಉತ್ತಮ ರಸ್ತೆ; ರೈತರಿಗೆ ಅನುಕೂಲ

ಹೊಸಕೋಟೆ: ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 7:09 IST
Last Updated 15 ಸೆಪ್ಟೆಂಬರ್ 2020, 7:09 IST
ಹೊಸಕೋಟೆಯ ಉಪ್ಪಾರಹಳ್ಳಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಹೊಸಕೋಟೆಯ ಉಪ್ಪಾರಹಳ್ಳಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.   

ಹೊಸಕೋಟೆ: ‘ಹಳ್ಳಿಗಳಲ್ಲಿ ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲು ನಗರಗಳನ್ನು ಸಂಪರ್ಕಿಸುವ ರಸ್ತೆಗಳು ಉತ್ತಮವಾಗಿರಬೇಕು’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಅವರು ತಾಲ್ಲೂಕಿನ ಉಪ್ಪಾರಹಳ್ಳಿಯಿಂದ ಕಲ್ಲಹಳ್ಳಿ ಮೂಲಕ ಕುರುಬರಹಳ್ಳಿ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಕಳೆದ ಹತ್ತು ವರ್ಷಗಳ ಹಿಂದೆ ಡಾಂಬರೀಕರಣವಾದ ರಸ್ತೆಯು ಕಳೆದ ಆರೇಳು ವರ್ಷಗಳಿಂದ ಹಾಳಾಗಿದ್ದು ಜನರ ಓಡಾಟಕ್ಕೆ ಸಮಸ್ಯೆಯಾಗಿತ್ತು. ವಿಶೇಷವಾಗಿ ಮಳೆಗಾಲದಲ್ಲಿ ರೈತರಿಗೆ ತಾವು ಬೆಳೆದ ಉತ್ಪನ್ನಗಳನ್ನು ಸಾಗಿಸಲಾಗದೆ ತೊಂದರೆಪಡುತ್ತಿದ್ದರು. ಅದಕ್ಕಾಗಿ ಈ ಭಾಗದ ಜನತೆಗೆ ಮನವಿಯಂತೆ ಈ ಕಾರ್ಯವನ್ನು ಮಾಡುತ್ತಿರುವುದಾಗಿ ತಿಳಿಸಿದರು.

ADVERTISEMENT

‘ಜಿಲ್ಲಾ ಪಂಚಾಯಿತಿಯ ಪಂಚಾಯತ್ ರಾಜ್ ಯೋಜನೆ ಅಡಿಯಲ್ಲಿ ₹ 30 ಲಕ್ಷದಲ್ಲಿ ಕಾಮಗಾರಿ ನಡೆಸುತ್ತಿರುವುದಾಗಿ ತಿಳಿಸಿದರು. ತಕ್ಷಣಕ್ಕೆ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿ ಮಳೆಗಾಲದ ನಂತರ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ’ ಎಂದರು.

ಎಪಿಎಂಸಿ ರದ್ದತಿಗೆ ವಿರೋಧ: ‘ಸರ್ಕಾರವು ಎಪಿಎಂಸಿಗಳನ್ನು ರದ್ದುಪಡಿಸಿ ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು. ಎಪಿಎಂಸಿಯಿಂದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತಿದ್ದು ತಾಲ್ಲೂಕಿನಲ್ಲಿ ಗೊಣಕನಹಳ್ಳಿಯ ಬಳಿ ವಿಶಾಲವಾದ ಯಾರ್ಡ್ ಮೂಲಕ ರೈತರಿಗೆ ಅನುಕೂಲ ಮಾಡುತ್ತಿದ್ದು ವರ್ಷಕ್ಕೆ 15 ಲಕ್ಷಕ್ಕಿಂತ ಹೆಚ್ಚಿನ ಲಾಭ ಬರುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚು ಮಾಡುವ ಗುರಿ ಹೊಂದಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಕುಂದ, ಎಲ್‌ ಆ್ಯಂಡ್‌ ಟಿ ಮಂಜುನಾಥ್, ಶಾಮರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.