ADVERTISEMENT

ಸರ್ಕಾರದ ಸಕ್ಕರೆ: ವಂಚನೆ

ಸಂಸದ ಡಿ.ಕೆ ಸುರೇಶ್‌, ಮುಖಂಡ ವಿ.ಎಸ್‌. ಉಗ್ರಪ್ಪ ನೇತೃತ್ವದಲ್ಲಿ ದಾಳಿ

​ಪ್ರಜಾವಾಣಿ ವಾರ್ತೆ
Published 1 ಮೇ 2020, 22:12 IST
Last Updated 1 ಮೇ 2020, 22:12 IST
ಆನೇಕಲ್ ತಾಲ್ಲೂಕಿನ ಸರ್ಜಾಪುರ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷಿಯನ್ ಪ್ರೊಡಕ್ಷನ್ ಘಟಕಕ್ಕೆ ದಾಳಿ ನಡೆಸಿದ ಸಂಸದ ಡಿ.ಕೆ.ಸುರೇಶ್, ಶಾಸಕ ಬಿ.ಶಿವಣ್ಣ ಮತ್ತು ಮುಖಂಡ ವಿ.ಎಸ್‌.ಉಗ್ರಪ್ಪ ಪೊಟ್ಟಣಗಳನ್ನು ಪ್ರದರ್ಶಿಸಿದರು (ಎಡಚಿತ್ರ) ಪತ್ತೆಯಾಗಿರುವ ಬಿಜೆಪಿ ಮುಖಂಡರ ಲೇಬಲ್‌ನ ಸಕ್ಕರೆ ಪೊಟ್ಟಣಗಳು
ಆನೇಕಲ್ ತಾಲ್ಲೂಕಿನ ಸರ್ಜಾಪುರ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷಿಯನ್ ಪ್ರೊಡಕ್ಷನ್ ಘಟಕಕ್ಕೆ ದಾಳಿ ನಡೆಸಿದ ಸಂಸದ ಡಿ.ಕೆ.ಸುರೇಶ್, ಶಾಸಕ ಬಿ.ಶಿವಣ್ಣ ಮತ್ತು ಮುಖಂಡ ವಿ.ಎಸ್‌.ಉಗ್ರಪ್ಪ ಪೊಟ್ಟಣಗಳನ್ನು ಪ್ರದರ್ಶಿಸಿದರು (ಎಡಚಿತ್ರ) ಪತ್ತೆಯಾಗಿರುವ ಬಿಜೆಪಿ ಮುಖಂಡರ ಲೇಬಲ್‌ನ ಸಕ್ಕರೆ ಪೊಟ್ಟಣಗಳು   

ಆನೇಕಲ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಐಸಿಡಿಎಸ್‌ ಯೋಜನೆಯಡಿ ಪೂರೈಕೆಯಾಗಿರುವ ಸಕ್ಕರೆ ಪೊಟ್ಟಣಗಳಿಗೆ ಬಿಜೆಪಿ ಮುಖಂಡ, ಹೊರವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು ಅವರು ತಮ್ಮ ಹೆಸರಿನ ಲೇಬಲ್‌ ಅಂಟಿಸಿ ವಿತರಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ಆರೋಪಿಸಿದರು.

ಅವರು ತಾಲ್ಲೂಕಿನ ಸರ್ಜಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷಿಯನ್‌ ಪ್ರೊಡಕ್ಷನ್‌ ಘಟಕದ ಮೇಲೆ ದಾಳಿ ನಡೆಸಿ ಮಾತನಾಡಿದರು.

ಅಂಗನವಾಡಿ ಕೇಂದ್ರಗಳ ಮಕ್ಕಳು, ಬಾಣಂತಿಯರು, ಗರ್ಭಿಣಿಯರಿಗೆ ನೀಡಲು ಸರ್ಕಾರದ ವತಿಯಿಂದ ನೀಡಲಾಗಿರುವ ಸಕ್ಕರೆ ಪೊಟ್ಟಣಗಳ ಮೇಲೆ ಬಿಜೆಪಿ ಮುಖಂಡ ಸಿ.ಮುನಿರಾಜು ಅವರು ಹೆಸರು ಹಾಕಿಸಿಕೊಂಡು ಬಡ ಕುಟುಂಬಗಳು ಮತ್ತು ಕೂಲಿ ಕಾರ್ಮಿಕರಿಗೆ ಉಚಿತವಾಗಿ ವಿತರಿಸಲು ಸಿದ್ಧತೆ ನಡೆಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಅವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಮುಖಂಡರೇ ಇಂತಹ ಹೀನ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಹುನ್ನಾರ ನಡೆಸಿದ್ದಾರೆ. ಬಡವರ ಅನ್ನಕ್ಕೆ ಕನ್ನ ಹಾಕಲು ನಡೆಸಿರುವ ಈ ಕೃತ್ಯವನ್ನು ಶಾಸಕ ಬಿ.ಶಿವಣ್ಣ ಅವರು ಪತ್ತೆ ಹಚ್ಚಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಮಾತನಾಡಿ, ಸರ್ಕಾರದ ಸಕ್ಕರೆ ಪೊಟ್ಟಣಗಳ ಮೇಲೆ ಬಿಜೆಪಿ ಮುಖಂಡರ ಹೆಸರಿನ ರೀ ಪ್ಯಾಕಿಂಗ್‌ ಮಾಡಿ ಹಂಚಲು ಮುಂದಾಗಿರುವುದು ಹೇಯ ಕೃತ್ಯ ಎಂದು ಖಂಡಿಸಿದುರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ನೇರ ಹೊಣೆಯಾಗಿದ್ದು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಪ್ಲಿಮೆಂಟರಿ ನ್ಯೂಟ್ರಿಷಿಯನ್‌ ಪ್ರೊಡಕ್ಷನ್‌ ಘಟಕ ಅಂಗನವಾಡಿಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುತ್ತದೆ. ಆದರೆ,ಈ ಘಟಕಕ್ಕೆ ಪೂರೈಕೆಯಾಗಿರುವ ಬಗ್ಗೆ ಸ್ಟಾಕ್‌ ಬುಕ್‌ ಇಲ್ಲ. ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜಕೀಯ ಮಾಡುತ್ತಿದೆ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.