ADVERTISEMENT

ಪುರಸಭೆ ಅಭಿವೃದ್ಧಿಗೆ ಅನುದಾನ: ಶಾಸಕ ನಾರಾಯಣಸ್ವಾಮಿ ಒತ್ತಾಯ

ರಾಜ್ಯ ಸರ್ಕಾರಕ್ಕೆ ಶಾಸಕ ನಾರಾಯಣಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 2:20 IST
Last Updated 28 ಜನವರಿ 2021, 2:20 IST
ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು
ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು   

ದೇವನಹಳ್ಳಿ: ಪುರಸಭೆ ವ್ಯಾಪ್ತಿಯ ಜಲ್ವಂತ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ 6ನೇ ವಾರ್ಡ್‌ನಲ್ಲಿ ತರಗು ಚಾವಡಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸಮುದಾಯ ಭವನ, 23ನೇ ವಾರ್ಡ್‌ನ ವಿನಾಯಕ ನಗರದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಮತ್ತು ಪುರಸಭೆ ಆವರಣದಲ್ಲಿ ಪೌರಕಾರ್ಮಿಕರ ಶೌಚಾಲಯ ಮತ್ತು ಸ್ನಾನದ ಗೃಹ ಉದ್ಘಾಟಿಸಿದ ನಂತರ ಮಾತನಾಡಿದರು.

ಸಮುದಾಯದ ಭವನಕ್ಕೆ 14ನೇ ಹಣಕಾಸು ಮತ್ತು ಪುರಸಭಾ ನಿಧಿಯಡಿ ಒಟ್ಟು ₹ 28 ಲಕ್ಷ, 2018-19ನೇ ಸಾಲಿನ ಪುರಸಭಾ ನಿಧಿ ₹ 11ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.

ADVERTISEMENT

ಒರಾಕಲ್ ಸಂಸ್ಥೆ ಮತ್ತು ಸಿ.ಡಿ.ಡಿ ಸೊಸೈಟಿಯಿಂದ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸ್ನಾನದ ಗೃಹ ಮತ್ತು ಶೌಚಾಲಯ ನಿರ್ಮಾಣಕ್ಕೆ ₹ 20 ಲಕ್ಷ ವೆಚ್ಚ ಮಾಡಲಾಗಿದೆ. ಇದರ ಸದ್ಬಳಕೆಯಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕೇಂದ್ರಕ್ಕೆ ದೊಡ್ಡಬಳ್ಳಾಪುರ ಎಂದು ಹೆಸರಿಡಬೇಕು ಮತ್ತು ಜಿಲ್ಲಾ ಕೇಂದ್ರ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ. ಸಂವಿಧಾನದಡಿ ಪ್ರತಿಯೊಬ್ಬರಿಗೆ ಕೇಳುವ ಮತ್ತು ಪಡೆಯುವ ಹಕ್ಕು ಇದೆ. ಆದರೆ, ನಾಲ್ಕು ತಾಲ್ಲೂಕಿನ ಜನ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಅಂದಿನ ಸರ್ಕಾರ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನ ಮಧ್ಯಭಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಿದೆ. ಎರಡೂವರೆ ವರ್ಷದ ನಂತರ ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಬೇಕು ಎಂಬುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಜಿಲ್ಲಾಡಳಿತ ಭವನವು ದೇವನಹಳ್ಳಿ ತಾಲ್ಲೂಕು ಕಂದಾಯ ಇಲಾಖೆ ವ್ಯಾಪ್ತಿಯ ಜಮೀನಿನಲ್ಲಿದೆ. ಅರ್ಧಭಾಗ ಸ್ಥಳೀಯ ರೈತರು ನೀಡಿದ್ದಾರೆ. ಜಿಲ್ಲಾಡಳಿತ ಭವನದ ಕಟ್ಟಡವನ್ನು ತರಕಾರಿ ಚೀಲದಂತೆ ಎತ್ತಿ ಸ್ಥಳಾಂತರಿಸಲು ಸಾಧ‍್ಯವೇ, ಯಾವುದೇ ಕಾರಣಕ್ಕೂ ಆ ರೀತಿ ಆಗುವುದಿಲ್ಲ ಎಂದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಸಿ. ಜಗನ್ನಾಥ್, ಪುರಸಭೆ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮಿನಾರಾಯಣ್, ಸ್ಥಾಯಿಸಮಿತಿ ಅಧ್ಯಕ್ಷ ಎಸ್. ನಾಗೇಶ್, ಸದಸ್ಯರಾದ ಎನ್. ರಘು, ಜಿ.ಎ. ರವೀಂದ್ರ, ಬಾಂಬೆ ನಾರಾಯಣಸ್ವಾಮಿ, ಬಾಲರಾಜ್, ಗೋಪಿ, ಕೋಮಲಾ, ಲೀಲಾವತಿ, ಲಕ್ಷ್ಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಮುನಿನಂಜಪ್ಪ, ಪುರಸಭೆ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಎಂಜಿನಿಯರ್ ಗಜೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.