ADVERTISEMENT

ಸ್ಮಶಾನ ಜಲಾವೃತ: ಅಂತ್ಯಕ್ರಿಯೆಗೆ ಪರದಾಟ

ಹೊಲಗಳಿಗೆ ನುಗ್ಗಿದ ಮಳೆ ನೀರು l ಫಸಲು ನಾಶದಿಂದ ಅನ್ನದಾತರು ಕಂಗಾಲು l ರೇಷ್ಮೆ ಉದ್ಯಮಕ್ಕೂ ಪೆಟ್ಟು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:02 IST
Last Updated 7 ಸೆಪ್ಟೆಂಬರ್ 2022, 3:02 IST
ವಿಜಯಪುರ ಪಟ್ಟಣದ ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ಸ್ಮಶಾನಗಳು ನೀರಿನಲ್ಲಿ ಮುಳುಗಡೆಯಾಗಿವೆ
ವಿಜಯಪುರ ಪಟ್ಟಣದ ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ಸ್ಮಶಾನಗಳು ನೀರಿನಲ್ಲಿ ಮುಳುಗಡೆಯಾಗಿವೆ   

ವಿಜಯಪುರ (ಬೆಂ.ಗ್ರಾಮಾಂತರ):ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರ ಹೊಲಗಳು ಜಲಾವೃತಗೊಂಡಿವೆ. ಜೊತೆಗೆ, ಸ್ಮಶಾನಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡಲು ಸ್ಥಳೀಯರು ಪರದಾಡುವಂತಾಗಿದೆ.

ಶಿಡ್ಲಘಟ್ಟ-ವಿಜಯಪುರ ಮುಖ್ಯರಸ್ತೆಯಲ್ಲಿರುವ ಸ್ಮಶಾನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಶೃಂಗೇರಿ ಶಾರದ ವಿದ್ಯಾಸಂಸ್ಥೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಆಂಜನೇಯ ಸ್ವಾಮಿ ದೇವಾಲಯವೂ ಮುಳುಗಡೆಯಾಗಿದ್ದು, ಪೂಜೆ ಸಲ್ಲಿಕೆಗೆ ಜನರು ಹೋಗಲು ಸಾಧ್ಯವಾಗುತ್ತಿಲ್ಲ.

ರೈತರು ಇತ್ತೀಚೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಉಳುಮೆ ಮಾಡಿ, ಬಿತ್ತನೆ ಮಾಡಿದ್ದ ಹೊಲಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ಈ ವರ್ಷದಲ್ಲಿ ಬೆಳೆ ಬೆಳೆಯುವುದು ಅನುಮಾನವಾಗಿದೆ. ರಾಸುಗಳಿಗೆ ಮೇವು ಇಲ್ಲದೇ ಪರದಾಡುವ ಸಾಧ್ಯತೆ ಇದೆ.

ADVERTISEMENT

ದ್ರಾಕ್ಷಿ, ಹೂವು, ಕೋಸು, ಟೊಮೊಟೊ, ಜೋಳ, ತೊಂಡೆಕಾಯಿ, ಬದನೆಕಾಯಿ, ಹೀರೆಕಾಯಿ, ಚಿಕ್ಕಡಿಕಾಯಿ ಸೇರಿದಂತೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ನೀರು ಪಾಲಾಗಿವೆ. ಈಗ ಹೊಲಗಳಲ್ಲಿ ತುಂಬಿಕೊಂಡಿರುವ ನೀರು ಕಡಿಮೆಯಾಗಲು ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪುನಃ ನವೆಂಬರ್‌ನಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾದರೆ, ಈ ವರ್ಷದಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂಬುದು ರೈತರ ಆತಂಕ.

ದನ–ಕರುಗಳಿಗೆ ಹಸಿರು ಮೇವು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹಳೆಯ ಮನೆಗಳಲ್ಲಿ ವಾಸವಾಗಿರುವವರು ಪ್ರಾಣವನ್ನು ಬಿಗಿ ಹಿಡಿದುಕೊಂಡು ವಾಸ ಮಾಡುವಂತಾಗಿದೆ. ರಾತ್ರೋರಾತ್ರಿ ಮನೆಗಳು ಕುಸಿದು ಬೀಳುತ್ತಿವೆ. ಇದರಿಂದ ಜನರು ಭಯಭೀತರಾಗಿದ್ದಾರೆ.

ಸೊಪ್ಪು ಹೊಂದಿಸುವುದು ಕಷ್ಟ: ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿರುವ ರೈತರು ಹಿಪ್ಪುನೇರಳೆ ಸೊಪ್ಪು ಹೊಂದಿಸಲು ಪರದಾಡುತ್ತಿದ್ದಾರೆ. ಹಿಪ್ಪುನೇರಳೆ ತೋಟಗಳಿಗೆ ನೀರು ನುಗ್ಗಿರುವ ಕಾರಣ ತೋಟಗಳ ಬಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ರೈತರು ಬೇರೆ ಊರುಗಳಲ್ಲಿರುವ ಪರಿಚಯಸ್ಥ ರೈತರಿಂದ ಸೊಪ್ಪನ್ನು ಎರವಲಾಗಿ ತಂದು ಹುಳುಗಳಿಗೆ ನೀಡುತ್ತಿದ್ದಾರೆ. ಈ ಬೆಳೆಯು ನಿರೀಕ್ಷೆಯಷ್ಟು ಗುಣಮಟ್ಟದಲ್ಲಿ ಆಗುವುದು ಅನುಮಾನವಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕುರಿಗಳಿಗೆ ಮೇವಿನ ಅಭಾವ: ಹಳ್ಳಿಗಳಲ್ಲಿ ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಬಯಲಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಈಗ ಬಯಲು ಪ್ರದೇಶವೂ ಸೇರಿದಂತೆ ಕಣ್ಣು ಹಾಯಿಸಿದಷ್ಟು ನೀರು ತುಂಬಿ
ಕೊಂಡಿದೆ.

ಕುರಿಗಳನ್ನು ಮೇಯಿಸಲು ಜಾಗವಿಲ್ಲದೆ ಕುರಿಗಾಹಿಗಳು ಪರದಾಡುತ್ತಿದ್ದಾರೆ. ಎರಡು ದಿನಗಳಿಂದ ಕುರಿಗಳಿಗೆ ಸರಿಯಾಗಿ ಮೇವಿಲ್ಲದಂತಾಗಿದೆ ಎಂದು ಕುರಿಗಾಹಿ ನರಸಿಂಹಪ್ಪ ಅಸಹಾಯಕತೆ
ತೋಡಿಕೊಂಡರು.

ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಫಸಲು ನೀರಿನಲ್ಲಿ ಮುಳುಗಡೆಯಾಗಿದೆ. ಈಗಾಗಲೇ ಬೆಳೆಗಳು ಕೊಳೆಯುವ ಹಂತಕ್ಕೆ ತಲುಪಿವೆ. ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದೇವೆ. ಶ್ರಮ ಮತ್ತು ಬಂಡವಾಳ ನೀರು ಪಾಲಾಗಿದೆ. ನೂರಾರು ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ಸರ್ಕಾರ ವೈಜ್ಞಾನಿಕವಾಗಿ ಬೆಳೆ ಪರಿಹಾರ ವಿತರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.