ಆನೇಕಲ್: ತಾಲೂಕಿನಾದ್ಯಂತ ಸೋಮವಾರ ಸುರಿದ ಭಾರಿ ಮಳೆಯಿಂದ ತಾಲೂಕಿನ ವಿವಿಧೆಡೆಯ ರಸ್ತೆಗಳು ಹೊಳೆಯಂತೆ ಹರಿದವು. ನೀರಿನಿಂದ ತುಂಬಿದ್ದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದರು.
ರಾಷ್ಟ್ರೀಯ ಹೆದ್ದಾರಿ–44ರ ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ನೆರಳೂರು, ತಿರುಮಗೊಂಡನಹಳ್ಳಿ, ಬೆಲೆ ಸೇರಿದಂತೆ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ನೀರು ಹರಿಯಿತು. ಭಾರಿ ಮಳೆಗೆ ಸಾರ್ವಜನಿಕರು ತತ್ತರಿಸಿದರು. ದ್ವಿಚಕ್ರ ವಾಹನ ಸವಾರರು ಬೈಕ್‌ಗಳನ್ನುತಳ್ಳುತ್ತಾ ಮಳೆ ಮಳೆ ನೀರಿನಿಂದ ಪಾರಾಗಲು ಸಾಹಸ ಮಾಡಿದರ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಾಲ್ಕು ಕಿಲೋ ಮೀಟರಿಗೂ ಹೆಚ್ಚು ದೂರ ವಾಹನ ದಟ್ಟಣೆ ಉಂಟಾಗಿತ್ತು. ವಾಹನ ದಟ್ಟಣೆಯಿಂದ ವಾಹನಗಳು ಗಂಟೆಗಟ್ಟಲೆ ನಿಂತಲ್ಲಿಯೇ ನಿಂತಿದ್ದವು.
ಮಧ್ಯಾಹ್ನ ಮೂರರ ಸುಮಾರಿಗೆ ಪ್ರಾರಂಭವಾದ ಮಳೆ ಏಳು ಗಂಟೆಯಾದರೂ ಎಡಬಿಡದೆ ಸುರಿಯುತ್ತಿತ್ತು. ತಾಲೂಕಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ವೀರಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿಯೂ ಬಾರಿ ಮಳೆಯಿಂದ ಕಾರ್ಮಿಕರಿಗೆ ತೊಂದರೆಯಾಯಿತು. ಸಂಜೆ ಸಮಯವಾಗಿದ್ದರಿಂದ ಮನೆಗೆ ತೆರಳಲು ಸಾಧ್ಯವಾಗದೆ ಮಳೆಯಲ್ಲಿ ಸಿಲುಕಿಗೊಂಡ ತೊಂದರೆ ಅನುಭವಿಸಿದರು. ದ್ವಿಚಕ್ರ ವಾಹನ ಸವಾರರು ವೀರಸಂದ್ರದ ರಸ್ತೆಗಳಲ್ಲಿ ಹರಿಯುತ್ತಿದ್ದ ನೀರಿನಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು.
ತಾಲೂಕಿನ ದೊಮ್ಮಸಂದ್ರ, ಯಮರೆ, ಚಂದಾಪುರ ಸೇರಿದಂತೆ ವಿವಿಧಡೆ ಭಾರಿ ಮಳೆಯಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದರಿಂದ ಪಾದಾಚಾರಿಗಳು ರಸ್ತೆ ದಾಟಲಾಗದೆ ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.