ADVERTISEMENT

ಬೆಟ್ಟದಾಸನಪುರ: ಹೆಡಿಗೆ ಜಾತ್ರೆ ಸಂಭ್ರಮ, ಐದು ಸಾವಿರ ಹೋಳಿಗೆ ವಿತರಣೆ

ಮುದ್ದೆ, ಕಾಳು ಸಾರು ಸವಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 1:57 IST
Last Updated 10 ಆಗಸ್ಟ್ 2025, 1:57 IST
ಆನೇಕಲ್ ತಾಲ್ಲೂಕಿನ ಬೆಟ್ಟದಾಸನಪುರ ಗ್ರಾಮದಲ್ಲಿ ಹೆಡಿಗೆ ಜಾತ್ಯ ಪ್ರಯುಕ್ತ ಕೋಟೆ ತಿಮ್ಮರಾಯಸ್ವಾಮಿಗೆ ವಿಶೇಷ ಅಲಂಕಾರ
ಆನೇಕಲ್ ತಾಲ್ಲೂಕಿನ ಬೆಟ್ಟದಾಸನಪುರ ಗ್ರಾಮದಲ್ಲಿ ಹೆಡಿಗೆ ಜಾತ್ಯ ಪ್ರಯುಕ್ತ ಕೋಟೆ ತಿಮ್ಮರಾಯಸ್ವಾಮಿಗೆ ವಿಶೇಷ ಅಲಂಕಾರ   

ಆನೇಕಲ್: ತಾಲ್ಲೂಕಿನ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಟ್ಟದಾಸನಪುರ ಗ್ರಾಮದಲ್ಲಿ ಕೋಟೆ ತಿಮ್ಮರಾಯಸ್ವಾಮಿ ಮತ್ತು ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಹೆಡಿಗೆ ಜಾತ್ರೆ ಶನಿವಾರ ವಿಜೃಂಭಣೆಯಿಂದ ನಡೆಯಿತು.

ನೂರಾರು ಕುಟುಂಬಗಳು ಹೋಳಿಗೆ, ಪಾಯಸ, ಪೊಂಗಲ್‌ ಸೇರಿದಂತೆ ವಿವಿಧ ಪ್ರಸಾದವನ್ನು ದೇವಾಲಯಕ್ಕೆ ತಂದು ಹೆಡಿಗೆ ಜಾತ್ರೆಯಲ್ಲಿ ಭಕ್ತರಿಗೆ ವಿತರಿಸಿದರು.

ಬೆಟ್ಟದಾಸನಪುರ ಗ್ರಾಮದ ಕೋಟೆ ತಿಮ್ಮರಾಯಸ್ವಾಮಿ ಮತ್ತು ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ಶ್ರಾವಣದ ಮೂರನೇ ಶನಿವಾರ ಹೆಡಿಗೆ ಜಾತ್ರೆ ನಡೆಯುತ್ತದೆ. ದೇವಾಲಯಕ್ಕೆ ಸಂಬಂಧಿಸಿದ 30ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಹೋಳಿಗೆ, ಪಾಯಸ, ಪೊಂಗಲ್‌, ಮುದ್ದೆ, ಕಾಳುಸಾರು ಸೇರಿದಂತೆ ವಿವಿಧ ಪ್ರಸಾದವನ್ನು ದೇವಾಲಯಕ್ಕೆ ಹೊತ್ತು ತಂದಿದ್ದರು. ದೇವಾಲಯದಲ್ಲಿ ಮುದ್ದೆ, ಹೋಳಿಗೆಯನ್ನು ಒಂದೆಡೆ ಹಾಕಿ ದೇವರಿಗೆ ಸಮರ್ಪಿಸಿ ನಂತರ ಭಕ್ತರಿಗೆ ವಿತರಿಸಲಾಯಿತು. ಈ ಬಾರಿ ಐದು ಸಾವಿರಕ್ಕೂ ಹೆಚ್ಚು ಹೋಳಿಗೆಯನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.

ADVERTISEMENT

ದೇವಾಲಯದ ಪ್ರಸಾದವನ್ನು ಸವಿಯಲು ಸಾವಿರಾರು ಭಕ್ತರು ಆಗಮಿಸಿದ್ದರು. ಬೆಟ್ಟದ ಮೇಲಿನ ತಿಮ್ಮರಾಯಸ್ವಾಮಿ ಮತ್ತು ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ವಿಶಾಲ ಪ್ರಾಂಗಣದಲ್ಲಿ ಭಕ್ತರು ಒಂದೆಡೆ ಸೇರಿ ಹೆಡಿಗೆ ಜಾತ್ರೆಯಲ್ಲಿ ವಿವಿಧ ಬಗೆಯ ಪ್ರಸಾದವನ್ನು ಸವಿದರು.

ಹೆಡಿಗೆ ಜಾತ್ರೆಯ ಪ್ರಯುಕ್ತ ತಿಮ್ಮರಾಯಸ್ವಾಮಿ ಮತ್ತು ವಿಶ್ವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ದರ್ಶನ ಪಡೆದರು. ದೇವರ ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲು ಕಂಡು ಬಂದಿತು.

ತಾಲ್ಲೂಕಿನ ವಿವಿಧ ಗ್ರಾಮಗಳು, ಬೇಗೂರು, ದೊಡ್ಡತೋಗೂರು, ಹುಲಿಮಂಗಲ, ದೊಡ್ಡನಾಗಮಂಗಲ, ಚಿಕ್ಕನಾಗಮಂಗಲ, ಕೋನಪ್ಪನಅಗ್ರಹಾರ, ಹೊಸರೋಡ್‌, ಕೋರಮಂಗಲದಲ್ಲಿ, ಮೈಲಸಂದ್ರ, ವಿಟ್ಟಸಂದ್ರ, ಹಾರಗದ್ದೆ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಹೆಡಿಗೆ ಜಾತ್ರೆಯಲ್ಲಿ ಪಾಲ್ಗೊಂಡರು.

ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ಭಕ್ತರು ತಮ್ಮ ಮನೆಗಳಿಂದ ಹೋಳಿಗೆ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ದೇವಾಲಯಕ್ಕೆ ತಂದು ಸ್ವಾಮಿಗೆ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಮುಖಂಡರಾದ ನಾರಾಯಣಸ್ವಾಮಿ, ಬ್ಯಾಗಡದದೇನಹಳ್ಳಿ ರಾಜಪ್ಪ, ಜಯಣ್ಣ, ಸುಂದರೇಶ್‌, ಮಾದಣ್ಣ, ಮಂಜುನಾಥಗೌಡ, ಚಾಮರಾಜು, ವಿನೋಧ್‌ ಕುಮಾರ್, ಮೈಲಸಂದ್ರ ಶ್ರೀನಿವಾಸ್, ನವೀನ್‌ ರೆಡ್ಡಿ ಇದ್ದರು.

ಆನೇಕಲ್ ತಾಲ್ಲೂಕಿನ ಬೆಟ್ಟದಾಸನಪುರ ಗ್ರಾಮದಲ್ಲಿ ಹೆಡಿಗೆ ಜಾತ್ರೆಯಲ್ಲಿ ಹೋಳಿಗೆ ಸವಿಯುತ್ತಿರುವ ಭಕ್ತರು

ಸೌಹಾರ್ದ ಜಾತ್ರೆ

ಶೈವ ಮತ್ತು ವಿಷ್ಣುವಿನ ಕ್ಷೇತ್ರವಾಗಿರುವ ಬೆಟ್ಟದಾಸನಪುರದಲ್ಲಿ ಪ್ರತಿ ವರ್ಷದ ಮೂರನೇ ಶ್ರಾವಣ ಶನಿವಾರ ಹೆಡಿಗೆ ಜಾತ್ರೆ ನಡೆಯುತ್ತದೆ. ಯಾವುದೇ ಜಾತಿ ಧರ್ಮ ಪಕ್ಷ ಬೇಧಗಳಿಲ್ಲದೇ 30ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ತಮ್ಮ ಮನೆಯ ಪ್ರಸಾದವನ್ನು ದೇವಾಲಯಕ್ಕೆ ತಂದು ದೇವರಿಗೆ ಸಮರ್ಪಿಸಿ ಭಕ್ತರಿಗೆ ಹಂಚುವುದು ವಾಡಿಕೆ. ಈ ಬಾರಿ 5ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಹಲವು ವರ್ಷಗಳ ಹಿಂದೆ ಅಲಂಕೃತ ಬಂಡಿಗಳಲ್ಲಿ ಪ್ರಸಾದವನ್ನು ತಂದು ಹಂಚಲಾಗುತ್ತಿತ್ತು ಎಂದು ಮುಖಂಡ ಬೆಟ್ಟದಾಸನಪುರ ನಾರಾಯಣಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.