ADVERTISEMENT

ಮಾರಕ ರೋಗ ನಿಯಂತ್ರಣಕ್ಕೆ ಸಹಕರಿಸಿ: ಆರೋಗ್ಯಾಧಿಕಾರಿ ಡಾ.ಸಂಜಯ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 13:18 IST
Last Updated 18 ಸೆಪ್ಟೆಂಬರ್ 2019, 13:18 IST
ಮಾರಕ ರೋಗಗಳ ಬಗ್ಗೆ ಜಾಗೃತಿ ಜಾಥಾದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್
ಮಾರಕ ರೋಗಗಳ ಬಗ್ಗೆ ಜಾಗೃತಿ ಜಾಥಾದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್   

ದೇವನಹಳ್ಳಿ: ‘ವಾರ್ಷಿಕವಾಗಿ ಉಲ್ಬಣಿಸುವ ಮಾರಕ ರೋಗಗಳ ನಿಯಂತ್ರಣಕ್ಕೆ ಸ್ಥಳೀಯರ ಸಹಕಾರ ಅಗತ್ಯ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಹೇಳಿದರು .

ಇಲ್ಲಿನ ಪುರಸಭೆ ಮುಂಭಾಗ ಮಾರಕ ರೋಗಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿಅವರು ಮಾತನಾಡಿದರು.

‘ಸೋಂಕಿರುವ ಅನಾಫಿಲೀಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ. ಚಳಿ, ನಡುಕ, ಜ್ವರ ದೈಹಿಕವಾಗಿ ಸುಸ್ತು ಇದರ ಲಕ್ಷಣಗಳಾಗಿವೆ. ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಮೆದುಳು ಜ್ವರ, ಡೆಂಗಿ, ಚಿಕುನ್ ಗುನ್ಯಾ ಮತ್ತು ಆನೆಕಾಲು ರೋಗಗಳನ್ನು ನಿಯಂತ್ರಿಸಲು ಮುಂಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಯಾವುದೇ ಜ್ವರವಿರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ರಕ್ತ ಪರೀಕ್ಷೆ ಮಾಡಿದ ತಕ್ಷಣ ರೋಗದ ನಿಖರತೆ ಅರಿವಿಗೆ ಬಂದಾಗ ಚಿಕಿತ್ಸೆ ನೀಡಲು ಸುಲಭವಾಗಲಿದೆ’ ಎಂದು ಹೇಳಿದರು.

‘ಸೊಳ್ಳೆಗಳ ಕಾಟಕ್ಕೆ ಕ್ರಿಮಿನಾಶಕ ಸಿಂಪರಣೆ ಮಾಡಬೇಕು. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಚರಂಡಿಗಳಲ್ಲಿ ಕಸಕಡ್ಡಿ ಹೊರಹಾಕಿ ನೀರು ನಿಲ್ಲದಂತೆ ಸರಾಗವಾಗಿ ಹರಿಯಲು ಅವಕಾಶ ಮಾಡಬೇಕು’ ಎಂದರು.

ಡೆಂಗಿ ಮತ್ತು ಚಿಕುನ್ ಗುನ್ಯ ರೋಗ ಹರಡುವ ಸೊಳ್ಳೆಗಳು ನಿಂತ ಸ್ವಚ್ಛ ನೀರಿನಲ್ಲಿ ಹುಟ್ಟುತ್ತವೆ. ಈಡೀಸ್ ಎಂಬ ಸೊಳ್ಳೆಯಿಂದ ಹರಡುವ ರೋಗದ ಲಕ್ಷಣವೆಂದರೆ ಹಠಾತ್ತನೆ ಬರುವ ಜ್ವರ, ತೀವ್ರ ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ಮೈಕೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ. ಇವು ಕಂಡು ಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಂದ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅನಿವಾರ್ಯ ಎಂದು ಹೇಳಿದರು.

ಆರೋಗ್ಯ ಶಿಕ್ಷಣಾಧಿಕಾರಿ ವಿಶ್ವೇಶ್ವರಯ್ಯ, ಆಸ್ಪತ್ರೆ ಸಿಬ್ಬಂದಿ ಹಾಗೂ ಅಶಾ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.