ADVERTISEMENT

‘ಗ್ರಾಮ ವಾಸ್ತವ್ಯ ಜನರಿಗೆ ಸಹಕಾರಿ’

ಶಾಸಕ ಟಿ. ವೆಂಕಟರಮಣಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:35 IST
Last Updated 17 ಅಕ್ಟೋಬರ್ 2021, 4:35 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಉದ್ದಿಚಿಕ್ಕನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶಾಸಕ ಟಿ. ವೆಂಕಟರಮಣಯ್ಯ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ. ಚುಂಚೇಗೌಡ, ತಹಶೀಲ್ದಾರ್‌ ಟಿ.ಎಸ್‌. ಶಿವರಾಜು, ಸಬ್‌ಇಸ್ಪೆಕ್ಟರ್‌ ವಿ. ಗಜೇಂದ್ರ ಹಾಜರಿದ್ದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಉದ್ದಿಚಿಕ್ಕನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶಾಸಕ ಟಿ. ವೆಂಕಟರಮಣಯ್ಯ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ. ಚುಂಚೇಗೌಡ, ತಹಶೀಲ್ದಾರ್‌ ಟಿ.ಎಸ್‌. ಶಿವರಾಜು, ಸಬ್‌ಇಸ್ಪೆಕ್ಟರ್‌ ವಿ. ಗಜೇಂದ್ರ ಹಾಜರಿದ್ದರು   

ದೊಡ್ಡಬಳ್ಳಾಪುರ:ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಸಮಸ್ಯೆಗಳನ್ನು ಗ್ರಾಮದಲ್ಲೇ ಪರಿಹರಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕಿನ ಮಧುರೆ ಹೋಬಳಿಯ ಉದ್ದಿಚಿಕ್ಕನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಪಡಿತರ ಚೀಟಿ, ಪೌತಿ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಪೋಡಿ, ಉಳುಮೆ ಚೀಟಿ, ಹಕ್ಕು ಪತ್ರಗಳ ವಿತರಣೆ ಮಾಡುವ ಸಲುವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ರೈತರು ಕಂದಾಯ ಇಲಾಖೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ADVERTISEMENT

ತಹಶೀಲ್ದಾರ್ ಟಿ.ಎಸ್. ಶಿವರಾಜ್ ಮಾತನಾಡಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಗ್ರಾಮದಲ್ಲೇ ಆಲಿಸಲಾಗುತ್ತಿದೆ. ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೆಲ ತಿಂಗಳ ಹಿಂದೆ ಸಾಸಲು ಹೋಬಳಿಯ ಹೊಸಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ 688 ವಿವಿಧ ಸಾಮಾಜಿಕ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಹಾಗೂ ಕಂದಾಯ ಸಮಸ್ಯೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು ಎಂದರು.

ಇಂದಿನ ಕಾರ್ಯಕ್ರಮದಲ್ಲಿ ಕೋಡಿಪಾಳ್ಯ, ಉದ್ದಿಚಿಕ್ಕನಹಳ್ಳಿ, ಇಸ್ತೂರು ಸ್ಮಶಾನಕ್ಕೆ ಜಮೀನು, ಆಶ್ರಯ ಯೋಜನೆಗೆ ಗೋಮಾಳ ನೀಡಲು ಮನವಿ, ಕನಸವಾಡಿ ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮನವಿ, ಸ್ಮಶಾನ ಒತ್ತುವರಿ ತೆರವಿಗೆ ಮನವಿ ಹಾಗೂ ಶಾಲೆಯ ಹಿಂಬದಿಯಲ್ಲಿನ ಮರಗಳ ಬೆಲೆ ನಿಗದಿ ಮಾಡಿ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.

ಕಂದಾಯ ಇಲಾಖೆ 31, ಪಂಚಾಯತ್ ರಾಜ್ ಇಲಾಖೆಯ 30, ಲೋಕೋಪಯೋಗಿ ಇಲಾಖೆ 7, ಅರಣ್ಯ ಇಲಾಖೆಯ 1, ಸರ್ವೆ ಇಲಾಖೆಯ 13, ಆಹಾರ ಇಲಾಖೆಯ 1 ಸೇರಿ ಒಟ್ಟು 78 ಅರ್ಜಿಗಳನ್ನು ಗ್ರಾಮಸ್ಥರು
ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ. ಚುಂಚೇಗೌಡ, ಸಿಡಿಪಿಒ ಎಸ್. ಅನಿತಾಲಕ್ಷ್ಮೀ, ಸಬ್‌ಇಸ್ಪೆಕ್ಟರ್‌ ವಿ. ಗಜೇಂದ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.