ADVERTISEMENT

ನೀರು ಬೂದಿಗೆರೆಗೂ ಎಚ್.ಎನ್.ವ್ಯಾಲಿ ಹರಿಸಿ

ಎತ್ತಿನಹೊಳೆ ಯೋಜನೆ ಅನುಷ್ಠಾನ ವಿಳಂಬಕ್ಕೆ ಬೇಸರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 14:02 IST
Last Updated 6 ಫೆಬ್ರುವರಿ 2020, 14:02 IST
ಚನ್ನರಾಯಪಟ್ಟಣ ಹೋಬಳಿ ಬೆಟ್ಟಕೋಟೆ ಕೆರೆಗೆ ಎಚ್.ಎನ್.ವ್ಯಾಲಿ ಯೋಜನೆಯ ನೀರು ಹರಿಯುತ್ತಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಸಿ.ನಾರಾಯಣಸ್ವಾಮಿ ವೀಕ್ಷಣೆ ಮಾಡಿದರು
ಚನ್ನರಾಯಪಟ್ಟಣ ಹೋಬಳಿ ಬೆಟ್ಟಕೋಟೆ ಕೆರೆಗೆ ಎಚ್.ಎನ್.ವ್ಯಾಲಿ ಯೋಜನೆಯ ನೀರು ಹರಿಯುತ್ತಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಸಿ.ನಾರಾಯಣಸ್ವಾಮಿ ವೀಕ್ಷಣೆ ಮಾಡಿದರು   

ವಿಜಯಪುರ: ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಕೆರೆಗೆ ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ಹರಿಸುತ್ತಿರುವುದು ಸಂತಸ ತಂದಿದೆಯಾದರೂ ಬೂದಿಗೆರೆ ಕೆರೆಗೆ ಹರಿಸದಿರುವುದು ನೋವು ತಂದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಲಕ್ಷ್ಮೀನಾರಾಯಣಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಕಾಲಕ್ಕೆ ಸರಿಯಾಗಿ ಮಳೆಯಾಗದೆ ಬಯಲುಸೀಮೆ ಭಾಗದಲ್ಲಿನ ಯಾವುದೇ ಕೆರೆ, ಕುಂಟೆಗಳಲ್ಲಿ ಒಂದು ಹನಿ ನೀರಿಲ್ಲದ ಕಾರಣ ಈ ಭಾಗದಲ್ಲಿನ ಅಂತರ್ಜಲದ ಮಟ್ಟ 1,800 ಅಡಿಗಳಿಗೆ ಕುಸಿದಿದೆ. ಕೃಷಿಯನ್ನೇ ಪ್ರಧಾನ ಕಸುಬನ್ನಾಗಿಸಿಕೊಂಡು ಬದುಕುತ್ತಿರುವ ರೈತರು, ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದರು.

ಪಶ್ಚಿಮಘಟ್ಟಗಳಿಂದ ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಬಯಲುಸೀಮೆ ಪ್ರದೇಶಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ಹರಿಸಬೇಕು ಎಂದು ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ ವರದಿಯನ್ನು ಆಧರಿಸಿ 4 ದಶಕಗಳಿಂದ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ. ಆದರೂ ಎಚ್.ಎನ್.ವ್ಯಾಲಿ ಯೋಜನೆಯಡಿ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಪೈಪ್‌ಲೈನ್ ಮೂಲಕ ಹರಿಸುತ್ತಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಬೂದಿಗೆರೆ ಕೆರೆಯ ಅಭಿವೃದ್ಧಿ ಹಾಗೂ ರಾಜಕಾಲುವೆಗಳ ಅಭಿವೃದ್ಧಿ ಸ್ಥಳೀಯರ ಸಹಕಾರದಿಂದ ಅಭಿವೃದ್ಧಿ ಪಡಿಸಿದ್ದೇವೆ. ಬೂದಿಗೆರೆ ಕೆರೆಗೂ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಿರಿಯ ಕಾಂಗ್ರೆಸ್ ನಾಯಕ ಸಿ.ನಾರಾಯಣಸ್ವಾಮಿ ಮಾತನಾಡಿ, ಈ ಭಾಗದಲ್ಲಿನ ರೈತರ ಸಂಕಷ್ಟವನ್ನು ಅರಿತುಕೊಂಡಿದ್ದ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎಚ್.ಎನ್.ವ್ಯಾಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಇದರ ನಡುವೆ ಎತ್ತಿನಹೊಳೆ ಯೋಜನೆಯ ಸಾಕಾರಕ್ಕೆ ರಾಜ್ಯಸರ್ಕಾರ ಮೀಸಲಿಟ್ಟಿದ್ದ ₹8 ಸಾವಿರ ಕೋಟಿ ಅನುದಾನವನ್ನು ₹13 ಸಾವಿರ ಕೋಟಿಗಳಿಗೆ ಏರಿಕೆ ಮಾಡಿದ್ದರು. ಕೆಲವು ತಾಂತ್ರಿಕ ದೋಷಗಳಿಂದಾಗಿ ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿದೆ ಎಂದರು.

ಕೆರೆಗಳನ್ನು ತುಂಬಿಸಲು ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ಹರಿಸಿರುವುದು ಸಂತಸ ತಂದಿದೆ. ಕೆರೆಗಳಲ್ಲಿ ನೀರು ಸಂಗ್ರಹಗೊಂಡು ಅಂತರ್ಜಲದ ಮಟ್ಟ ಏರಿಕೆಯಾದರೆ ಈ ಭಾಗದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಿಕೊಳ್ಳಲು ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿಗೊಳ್ಳಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.