ADVERTISEMENT

ಹೊಸಕೋಟೆ | ಕೆರೆಗಳಲ್ಲಿ ಅಕ್ರಮ ಮಣ್ಣು ಸಾಗಣೆ ಅವ್ಯಾಹತ

ಅಧಿಕಾರಿಗಳ ಸಹಕಾರದಿಂದ ಸಾಗಟ ಆರೋಪ । ಕೆರೆ ನಾಶ, ಅಂತರ್ಜಲಕ್ಕೆ ಕುತ್ತು

ಎನ್.ಡಿ.ವೆಂಕಟೇಶ್‌
Published 1 ಮಾರ್ಚ್ 2025, 5:10 IST
Last Updated 1 ಮಾರ್ಚ್ 2025, 5:10 IST
ಹೊಸಕೋಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ರಾತ್ರಿ ವೇಳೆ ಅಕ್ರಮ ಮಣ್ಣು ಸಾಗಾಟ
ಹೊಸಕೋಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ರಾತ್ರಿ ವೇಳೆ ಅಕ್ರಮ ಮಣ್ಣು ಸಾಗಾಟ   

ಹೊಸಕೋಟೆ: ತಾಲ್ಲೂಕಿನ ಕೆರೆಗಳಲ್ಲಿ ಅನುಮತಿ ಇಲ್ಲದೆ ಹಗಲು–ರಾತ್ರಿ ಎನ್ನದೆ ಮಣ್ಣು ತೆಗೆಯುತ್ತಿದ್ದು, ಮಣ್ಣು ಅಕ್ರಮ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಅವೈಜ್ಞಾನಿಕವಾಗಿ ಮಣ್ಣು ತೆಗೆಯುತ್ತಿರುವುದರಿಂದ ಒಂದೆಡೆ ಪ್ರಕೃತಿ ನಾಶವಾಗುತ್ತಿದ್ದರೆ, ಮತ್ತೊಂದೆಡೆ ಪ್ರಕೃತಿ ಸಂಪತ್ತಿನ ಮೂಲಕ ಸರ್ಕಾರಕ್ಕೆ ಬರುವ ಧನವು ಪೋಲಾಗುತ್ತಿದೆ.

ಇದೆಲ್ಲವು ತಿಳಿದಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಗ್ರಾ.ಪಂ ಅಧಿಕಾರಿಗಳು, ಜಾಣ ಕುಡುತನ ಪ್ರದರ್ಶಿಸುತ್ತಿದ್ದಾರೆ.

ಅಧಿಕಾರಿಗಳ ಕುಮ್ಮಕ್ಕು: ಕೆರೆ ಮತ್ತು ಸರ್ಕಾರಿ ಜಮೀನುಗಳಲ್ಲಿ ಮಣ್ಣ ತೆಗೆಯಬೇಕಾದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಬೇಕು. ಅನುಮತಿ ನೀಡಿದ ಬಳಿಕ ವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು. ಆದರೆ ತಾಲ್ಲೂಕಿನಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಮಣ್ಣು ಸಾಗಟ ಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ.

ADVERTISEMENT

ಕೆರೆ ನಾಶ, ಅಂತರ್ಜಲಕ್ಕೆ ಕುತ್ತು: ಒಂದಾನೊಂದು ಕಾಲದಲ್ಲಿ ನೀರಿನ ಬಹುಮುಖ್ಯ ಆಕರವಾಗಿದ್ದ ಕರೆಗಳು ಇಂದು ಭೂ ಮಾಫಿಯಾಕ್ಕೆ ಬಲಿಯಾಗಿವೆ. ಅಂತರ್ಜಲ ವೃದ್ಧಿಗೆ ಹೆಚ್ಚು ಸಹಕಾರಿಯಾಗಿದ್ದ ಕೆರೆಗಳು ಒತ್ತುವರಿ ಮತ್ತು ಮಣ್ಣಿನ ಅವೈಜ್ಞಾನಿಕ ಸಾಗಾಟಕ್ಕೆ ನಲುಗಿವೆ. ಇದರಿಂದ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ.

ಅನುಮತಿ ಪಡೆದ ಕೆರೆಗಳಲ್ಲಿಯೂ ಇಲಾಖೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಆಳದಲ್ಲಿ ಮಣ್ಣು ತೆಗೆದು ಹಳ್ಳ ಮಾಡುತ್ತಿರುವುದರಿಂದ ಕೆರೆ ಅಂತರ್ಜಲ ಪದರಕ್ಕೆ ಪೆಟ್ಟು ಬೀಳುತ್ತಿದೆ. ಅಲ್ಲದೆ ಮಳೆ ಬಂದಾಗ ಅವುಗಳಲ್ಲಿ ನೀರು ತುಂಬಿಕೊಂಡು, ಆಳ ತಿಳಿಯದೆ ಮಕ್ಕಳು ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಈಜು ಬಾರದೆ ಹಳ್ಳಕ್ಕಿಳಿಯುವ ಮಕ್ಕಳು, ಮರಿ ಮತ್ತು ಹಿರಿಯರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ಸಹ ನಡೆಯುತ್ತಿವೆ.

ನಾಲ್ಕು ಕೆರೆಗಳಿಗೆ ಮಾತ್ರ ಅನುಮತಿ: ತಾಲ್ಲೂಕಿನ ಎಲ್ಲಾ ಕೆರೆಗಳಲ್ಲಿಯೂ ಮಣ್ಣಿನ ಅಕ್ರಮ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತಾಲ್ಲೂಕಿನಲ್ಲಿ ಕೇವಲ ನಾಲ್ಕು ಹಳ್ಳಿಗಳಲ್ಲಿ ಮಾತ್ರ ಮಣ್ಣು ಸಾಗಾಟಕ್ಕೆ ಅನುಮತಿ ನೀಡಿದೆ ಎನ್ನುತ್ತಿದ್ದಾರೆ ಇಲಾಖೆ ಅಧಿಕಾರಿಗಳು.

ಹಾಡುಹಗಲೇ ಮಣ್ಣು ಸಾಗಟ ಎಗ್ಗಿಲ್ಲದೆ ತಾಲ್ಲೂಕಿನಲ್ಲಿ ನಡೆಯುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದರೂ ದೂರು ಬಂದಾಗ ಮಾತ್ರ ಭೇಟಿ ನೀಡುವ ಅಧಿಕಾರಿಗಳು ಕಾಟಾಚಾರಕ್ಕೆ ಪರಿಶೀಲನೆ ನಡೆಸಿ ಒಂದೋ ಎರಡೂ ನೋಟೀಸ್ ನೀಡಿ ಜಾರಿ ಮಾಡುತ್ತಾರೆ. ಆದರೆ ಮಣ್ಣು ಅಕ್ರಮ ಸಾಗಾಟ ನಿಂತಿಲ್ಲ.

ಲ್ಯಾಟರೈಟ್, ಮರ‍್ರಂ ರಾಜಕೀಯ

ತಾಲ್ಲೂಕಿನಲ್ಲಿ ಖನಿಜಯುಕ್ತ ಲ್ಯಾಟರೈಟ್ ಮತ್ತು ಮರ‍್ರಂ ಮಣ್ಣಿ ಇದೆ. ಈ ಎರಡೂ ಮಣ್ಣಿನ ಬೆಲೆ ವ್ಯತ್ಯಾಸವಿದೆ. ಹೆಚ್ಚು ಬೆಲೆ ಬಾಳುವ ಲ್ಯಾಟರೈಟ್ ಮಣ್ಣನ್ನು ಕಡಿಮೆ ಬೆಲೆಯ ಮರ‍್ರಂ ಮಣ್ಣಿಗೆ ಸಮನಾಗಿ ಬೆಲೆ ನಿಗದಿಪಡಿಸಲಾಗುತ್ತಿದೆ. ಲ್ಯಾಟರೈಟ್ ಮಣ್ಣನ್ನು ಸೀಮೆಂಟ್ ಮತ್ತಿತರೆ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದೆ. ಮಣ್ಣು ಸಾಗಾಟ ಮಾಡುವವರೊಂದಿಗೆ ಅಧಿಕಾರಿಗಳ ಶಾಮೀಲಾಗಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ದಲಿತ ವಿದ್ಯಾರ್ಥಿ ಒಕ್ಕೂಟದ ಮುಖಂಡ ರವೀಂದ್ರ ಅವರು ಆರೋಪಿಸಿದ್ದಾರೆ.

ಅಧಿಕಾರಿಗಳು ಭಾಗಿ, ಸರ್ಕಾರಕ್ಕೆ ನಷ್ಟ ಹೊಸಕೋಟೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಜೊತೆಗೆ ಲ್ಯಾಟರೈಟ್ ಮಣ್ಣನ್ನು ಮರ‍್ರಂ ದರದಲ್ಲಿ ಮಾರಾಟ ಮಾಡುತ್ತಿರುವುದು ಮತ್ತೊಂದು ದೊಡ್ಡ ಅಕ್ರಮ. ಈ ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಇವರಿಂದ ದೊಡ್ಡ ನಷ್ಟ ಉಂಟಾಗುತ್ತಿದೆ. ಸರ್ಕಾರಿ ಬೊಕ್ಕಸಕ್ಕೆ ಮತ್ತು ಪರಿಸರ ನಾಶಕ್ಕೆ ಕಾರಣಕರ್ತರಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ನ್ಯಾಯಾಯುತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ಹರೀಂದ್ರ, ಅಧ್ಯಕ್ಷ, ಸಿಐಟಿಯು ಹೊಸಕೋಟೆ ತಾಲ್ಲೂಕು
ಕೃಷಿ ಇಲಾಖೆಯಿಂದ ಅನುಮತಿ? ಮಣ್ಣು ಸಾಗಾಟಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಮಣ್ಣನ್ನು ಲ್ಯಾಬ್‌ಗೆ ತೆಗೆದುಕೊಂಡು ಹೋಗಿ ಅನಾಲಿಸಿಸ್ ಮಾಡಬೇಕು. ಕಬ್ಬಿಣ ಅಂಶ ಹೆಚ್ಚಿದ್ದರೆ ಅದು ಲ್ಯಾಟರೈಟ್, ಕಬ್ಬಿಣ ಅಂಶ ಕಡಿಮೆ ಇದ್ದರೆ ಅದು ಮರ‍್ರಂ, ಇದರಲ್ಲಿ ಲ್ಯಾಟರೈಟ್ ಮಣ್ಣಿನ ಹೆಚ್ಚು ಇದರಲ್ಲಿ ಸೀಮೆಂಟ್‌ಗೆ ಹೆಚ್ಚು ಬಳಕೆ ಮಾಡಿಕೊಳ್ಳುತ್ತಾರೆ. ಇದ್ಯಾವುದೂ ಇಲ್ಲಿ ನಡೆಯುತ್ತಿಲ್ಲ. ತಾಲ್ಲೂಕಿನಲ್ಲಿ ಕೆಲವರು ಮಣ್ಣು ಸಾಗಾಟಕ್ಕೆ ಸಂಬಂಧವೇ ಇಲ್ಲದ ಕೃಷಿ ಇಲಾಖೆಯಿಂದ ಪಡೆದುಕೊಂಡಿದ್ದೇವೆ ಎಂದು ಹೇಳಿ ನಕಲಿ ಅನುಮತಿ ಪತ್ರ ಇಟ್ಟುಕೊಂಡು ಮಣ್ಣು ಸಾಗಾಟ ಮಾಡುತ್ತಿದ್ದಾರೆ.
ರವೀಂದ್ರ, ದಲಿತ ವಿದ್ಯಾರ್ಥಿ ಪೆಡರೇಷನ್, ಹೊಸಕೋಟೆ
ಮರ್ರಂ ಮಣ್ಣಿಗೆ ಮಾತ್ರ ಅನುಮತಿ ತಾಲ್ಲೂಕಿನಲ್ಲಿ ಲ್ಯಾಟರೈಟ್ ಮಣ್ಣಿಗೆ ಅನುಮತಿ ನೀಡಿಲ್ಲ. ಮರ‍್ರಂ ಮಣ್ಣಿಗೆ ಮಾತ್ರ ಅನುಮತಿ ನೀಡಿದ್ದೇವೆ. ತಾಲ್ಲೂಕಿನ ಹಂದೇನಹಳ್ಳಿ, ಪರಮನಹಳ್ಳಿ, ವಾಗಟ, ದೊಡ್ಡಹುಲ್ಲೂರು ಗ್ರಾಮಗಳ ಕೆರೆಗಳಲ್ಲಿ ಮಾತ್ರ ಮಣ್ಣು ತೆಗೆಯಲು ಅನುಮತಿ ನೀಡಿದ್ದೇವೆ. ಅಲ್ಲದೆ ಇಲಾಖೆಯ ಸಂಪೂರ್ಣ ಅಧಿಕಾರ ಜಿ.ಪಂ ಸಿಇಒ ಅವರದ್ದು. ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ಮಾಹಿತಿಯಂತೆ ಅನುಮತಿ ನೀಡಿದ್ದೇವೆ. ಅನುಮತಿ ಪಡೆದ ನಂತರ ಕೆರೆಗಳಲ್ಲಿ ಹೂಳೆತ್ತುವ ಸಂದರ್ಭದಲ್ಲಿ ಎಲ್ಲವನ್ನೂ ಸ್ಥಳೀಯ ಗ್ರಾ.ಪಂನ ಅಧಿಕಾರಿಗಳೇ ನೋಡಿಕೊಳ್ಳಬೇಕು.
ಸವಿತಾ ಕುಮಾರಿ, ಅಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ನಕಲಿ ಅನುಮತಿ ಪತ್ರ  ಕೃಷಿ ಭೂಮಿ ಅಥವಾ ಯಾವುದೇ ಭೂಮಿಯಲ್ಲಿ ಮಣ್ಣು ತೆಗೆಯಲು ಅನುಮತಿ ನೀಡುವ ಅಧಿಕಾರ ನಮ್ಮ ವ್ಯಾಪ್ತಿಗೆ ಬರಲ್ಲ. ಹಿಂದಿನ ವರ್ಷದಲ್ಲಿ ಕೃಷಿ ಜಮೀನಿನ ಹಳ್ಳ ದಿನ್ನೆಗಳನ್ನು ಸಮತಟ್ಟು ಮಾಡಿ, ವ್ಯವಸಾಯ ಮಾಡಲು ಅನುಮತಿ ಕೊಟ್ಟಿದ್ದೇವೆ. ಮಣ್ಣು ಸಾಗಾಟಕ್ಕೆ ಅನುಮತಿ ನೀಡುವ ಅಧಿಕಾರ ಕೃಷಿ ಇಲಾಖೆಗಿಲ್ಲ. ಅಂತಹ ಅನುಮತಿ ಪತ್ರಗಳಿದ್ದರೆ ಅವು ನಕಲಿ ಪತ್ರ ಇರಬಹುದು. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪತ್ರ ಬಂದಿತ್ತು, ಅದನ್ನು ಪರಿಶೀಲಿಸಿ ಅದನ್ನು ನಾವು ನೀಡಿಲ್ಲ ಅದು ಪೋರ್ಜರಿ ಎಂದು ತಿಳಿಸಿದ್ದೇವೆ.
ಚಂದ್ರಪ್ಪ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ
ಹಾಡುಹಗಲೇ ಮಣ್ಣು ಸಾಗಾಟ
ಅಕ್ರಮ ಮಣ್ಣು ಸಾಗಾಟದಿಂದ ಕೆರೆಯಲ್ಲಿ ಬೃಹತ್‌ ಹಳ್ಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.