ADVERTISEMENT

ಹೊಸಕೋಟೆ: ಮಳೆಗಾಲಕ್ಕೆ ರಸ್ತೆಗಳೇ ಹಳ್ಳ–ಕೊಳ್ಳ

ಸೂಕ್ತ ಒಳ ಚರಂಡಿ ಇಲ್ಲದೆ ರಸ್ತೆಯಲ್ಲೇ ಹರಿವ ಕೊಳಚೆ

ಎನ್.ಡಿ.ವೆಂಕಟೇಶ್‌
Published 19 ಮೇ 2025, 2:49 IST
Last Updated 19 ಮೇ 2025, 2:49 IST
ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಜೋರು ಮಳೆಯ ಕಾರಣ ರಸ್ತೆಯಲ್ಲಿ ಉಂಟಾಗಿರುವ ಅವ್ಯವಸ್ಥೆ(ಸಂಗ್ರಹ ಚಿತ್ರ).
ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಜೋರು ಮಳೆಯ ಕಾರಣ ರಸ್ತೆಯಲ್ಲಿ ಉಂಟಾಗಿರುವ ಅವ್ಯವಸ್ಥೆ(ಸಂಗ್ರಹ ಚಿತ್ರ).   

ಹೊಸಕೋಟೆ: ನಗರದ ಸುತ್ತಲೂ ವಿಶಾಲವಾದ ದೊಡ್ಡ ಕೆರೆಗಳಿವೆ. ನಗರದಲ್ಲಿ ಬೀಳುವ ಮಳೆ ನೀರು ಕೆರೆಗಳಿಗೆ ಹಾದು ಹೋಗುವ ಎಲ್ಲಾ ಕಾಲುವೆಗಳು ಒತ್ತುವರಿಯಾಗಿರುವ ಜೊತೆಗೆ ವಿವಿಧ ಕಾರಣಗಳಿಂದ ಬಂದ್‌ ಆಗಿವೆ. ಇದರಿಂದ ಮಳೆ ಬಂದರೆ ನಗರದ ರಸ್ತೆಗಳು ಹಳ್ಳ–ಕೊಳ್ಳವಾಗಿ ಬದಲಾಗುತ್ತಿವೆ. 

ಇಳಿಜಾರು ಇಳಿಜಾರು ಇರುವ ಕಡೆ ಕೊಳಚೆ ನೀರು ಹರಿಯುತ್ತದೆ. ಇದರ ನಡುವೆಯೇ ವಾಹನ ಸವಾರರು ಮತ್ತು ಸಾರ್ವಜನಿಕರು ಸಾಗಬೇಕು. ಈ ಕಿರಿಕಿರಿ ಒಂದೆರಡು ದಿನದಲ್ಲ. ಪ್ರತಿ ಮಳೆಗಾಲದಲ್ಲೂ ಎದುರಾಗುವ ತೊಂದರೆ.

ನಗರದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದೆ ನಗರದ ಹೆದ್ದಾರಿ ಸೇರಿದಂತೆ ಒಳಭಾಗದ ರಸ್ತೆಗಳಲ್ಲಿ ಮಳೆ ನೀರು ಅಲ್ಲದೆ ಕೊಳಚೆ ನೀರೂ ಹರಿಯುತ್ತದೆ. ಇರುವ ಚರಂಡಿಯೂ ವೈಜ್ಞಾನಿಕವಾಗಿ ಕೂಡಿರುವ ಕಾರಣ ಮಳೆ ನೀರು ಮತ್ತು ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆ ಮತ್ತು ಸಮೀಪದ ಮನೆಗಳಿಗೆ ನುಗ್ಗುತ್ತದೆ. ಕೆಲವೊಮ್ಮ ಕೊಳಚೆ ನೀರು ರಸ್ತೆಯಲ್ಲೇ ನಿಂತು ಗಲೀಜಿನ ಕೂಪವಾಗುತ್ತದೆ.

ADVERTISEMENT

ನಗರದಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ ಮತ್ತಿತರೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದರಿಂದ ಕೆಲವು ಕಡೆಗಳಲ್ಲಿ ಕೊಳಚೆ ನೀರು ಹರಿಯದೆ ಸ್ಥಳದಲ್ಲೇ ಸಂಗ್ರಹವಾಗಿ ಗುಬ್ಬು ನಾರುತ್ತಿದೆ.

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಗರವನ್ನು ಎರಡು ಭಾಗಗಳಾಗಿ ಬೇರ್ಪಡಿಸುತ್ತದೆ. ಕಾಲೇಜು ರಸ್ತೆಯ ಭಾಗದ ಮಳೆ ನೀರು ಮತ್ತು ಅಲ್ಲಿಂದ ರಸ್ತೆಯ ಮೂಲಕವೇ ಚಿಕ್ಕಕೆರೆ ಸೇರುತ್ತಿದೆ. ರಸ್ತೆಯ ಸಮೀಪ ಇರುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ನಗರದ ಚನ್ನೈ ಹೆದ್ದಾರಿಯಲ್ಲಿ ಅಂಬೇಡ್ಕರ್ ಕಾಲನಿಯ ಸಮೀಪದ ಪ್ರದೇಶ ಇಳಿಜಾರಿನಿಂದ ಕೂಡಿದೆ. ಮಳೆ ಬಂದರೆ ಇಲ್ಲಿ ಸಂಚರಿಸುವುದೇ ದೊಡ್ಡ ಅಪಾಯವಾಗಿದೆ. 

ಇದು ಆಂಧ್ರ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಒಮ್ಮೆಮ್ಮೊ ನೀರು ಮೊಣಕಾಲಿನ ಉದ್ದಕ್ಕೆ ನಿಂತು ವಾಹನಗಳು ಮುಂದೆ ಸಾಗಲಾಗದೆ ಕೆಟ್ಟು ನಿಲ್ಲುತ್ತವೆ. ಇತ್ತೀಚೆಗೆ ಮಳೆ ನೀರು ನಿಂತು ರೋಗಿಗಳನ್ನು ಹೊತ್ತು ಆಂಬುನೆನ್ಸ್‌ ಮುಂದೆ ಸಾಗಲಾಗದೆ ನಿಂತಲ್ಲಿ ನಿಂತಿತು. ನೀರನ್ನು ಸರಾಗವಾಗಿ ಹರಿಯುವಂತೆ ಮಾಡಿದ ಮೇಲೆ ಆಂಬುಲೆನ್ಸ್‌ ತೆರಳಿತು.

ನಗರದ ಅಂಬೇಡ್ಕರ್ ಕಾಲನಿಯ ಬಳಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಅಂಬ್ಯುಲೆನ್ಸ್ ರಸ್ತೆಯಲ್ಲಿಯೇ ಕೆಟ್ಟು ನಿಂತಿರುವುದು.
ಬೆಂಗಳೂರಿಗೆ ಹೊಂದಿಕೊಂಡಿರುವ ನಗರಕ್ಕೆ ಕನಿಷ್ಠ ಮೂಲ ಸೌಕರ್ಯವು ಇಲ್ಲದೆ ಸಮಸ್ಯೆಗಳು ತಾಂಡವವಾಡುತ್ತಿವೆ. ಮಳೆ ಬಂದರೆ ನಾಗರಿಕರೂ ನರಕ ಯಾತನೆ ಅನುಭವಿಸಬೇಕು.
ರಮೇಶ್ ಹೊಸಕೋಟೆ.
ಜನರ ಸಮಸ್ಯೆ ಗಮನಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ವಾರಕ್ಕೊಮ್ಮೆ ನಗರ ಪ್ರದಕ್ಷಿಣೆ ಮಾಡಬೇಕು. ಆಗ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಶ್ರೀನಿವಾಸ್ ಆಚಾರ್ ಸ್ಥಳೀಯ

ಅವೈಜ್ಞಾನಿಕ ಕಾಮಗಾರಿಯೇ ಕಾರಣ

ಆಂಧ್ರಪ್ರದೇಶ ಮತ್ತು ತಮಿಳುನಾಡು ಹೆದ್ದಾರಿ ಸಮೀಪ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ನಗರ ಬೆಳವಣಿಗೆಗೆ ಅನುಗುಣವಾಗಿ ಚರಂಡಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು. ನಗರದಲ್ಲಿ ಬಹುತೇಕ ಕಾಮಗಾರಿಗಳು ಅವೈಜ್ಞಾನಿಕವಾಗಿ ಕೂಡಿದೆ. ಇದರಿಂದ ಸಣ್ಣ ಮಳೆ ಬಂದರೂ ರಸ್ತೆಗಳಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಮುಖಂಡ ವೆಂಕಟರಾಜು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಬೆಳವಣಿಗೆ ತಕ್ಕಂತೆ ಅಭಿವೃದ್ಧಿ

ಹೊಸಕೋಟೆ ನಗರದ ಬೆಳವಣಿಗೆಗೆ ತಕ್ಕಂತೆ ನಗರವನ್ನು ಅಭಿವೃದ್ಧಿಪಡಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ನಗರದ ಸುತ್ತಲೂ ಅಪಾರ ಪ್ರಮಾಣದ ನೀರು ಸಂಗ್ರಹ ಆಗುವ ಎರಡು ದೊಡ್ಡ ಕೆರೆಗಳಿವೆ. ಆ ಕೆರೆಗಳಿಗೆ ನೀರು ಸರಾಗವಾಗಿ ಹರಿದು ಹೋಗುವಂತೆ ವೈಜ್ಞಾನಿಕ ಚರಂಡಿ ನಿರ್ಮಿಸಬೇಕು ಮಹೇಶ್ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.