ADVERTISEMENT

ಹೊಸಕೋಟೆಗೆ ಕಾವೇರಿ ನೀರು

₹46 ಕೋಟಿ ವೆಚ್ಚದಲ್ಲಿ ಡಿಪಿಆರ್‌ ಸಿದ್ಧ: ಶಾಸಕ ಶರತ್‌ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 15:57 IST
Last Updated 17 ಸೆಪ್ಟೆಂಬರ್ 2023, 15:57 IST
ಹೊಸಕೋಟೆ ನಗರದ ಕಮ್ಮವಾರಿ ಪೇಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಶರತ್ ಉದ್ಘಾಟಿಸಿದರು
ಹೊಸಕೋಟೆ ನಗರದ ಕಮ್ಮವಾರಿ ಪೇಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಶರತ್ ಉದ್ಘಾಟಿಸಿದರು   

ಹೊಸಕೋಟೆ: ವೈಟ್‌ಫೀಲ್ಡ್ ಭಾಗದ ವಿವಿಧ ವಾರ್ಡ್‌ಗಳಿಗೆ ಸರಬರಾಜು ಮಾಡುತ್ತಿರುವ ಕಾವೇರಿ ನೀರನ್ನು ನಗರಕ್ಕೆ ತರಲು ₹46 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಹ ಸಿದ್ಧಪಡಿಸಲಾಗಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಮೂರನೇ ವಾರ್ಡ್‌ ಕಮ್ಮವಾರಿ ಪೇಟೆಯಲ್ಲಿ ಶುದ್ಧಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ನಲ್ಲಿಗಳ ಮೂಲಕ ಶುದ್ಧನೀರು ಸರಬರಾಜು ಮಾಡುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ಮೂಲಕ ತಾಲ್ಲೂಕಿಗೆ 1.08 ಟಿಎಂಸಿ, ನಗರಕ್ಕೆ 0.2 ಟಿಎಂಸಿ ನೀರನ್ನು ತರಲಾಗುವುದು ಎಂದು ತಿಳಿಸಿದರು.

ADVERTISEMENT

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲೂಕಿನಾದ್ಯಂತ ನೀರು ಸರಬರಾಜಿಗೆ ಕೊಳವೆಬಾವಿ ಆಶ್ರಯಿಸುವಂತಾಗಿದ್ದು, 1,500 ಅಡಿಗಳಷ್ಟು ಆಳದಿಂದ ನೀರು ತೆಗೆದು ಮನೆಗಳಿಗೆ ಸರಬರಾಜು ಮಾಡಬೇಕಾಗಿದೆ. ಈ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದೆ. ಇದನ್ನು ಕುಡಿದ ಜನರು ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.

ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆಯ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ 80 ಸಾವಿರ ಜನಸಂಖ್ಯೆ ಇದ್ದು, ಆರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಹಾಗೂ ಕಾವೇರಿ ನೀರು ಸರಬರಾಜು ಯೋಜನೆ ಸಾಕಾರಗೊಂಡರೆ ನಗರದಲ್ಲಿ ಪ್ರತಿ ದಿನ ನೀರು ಸರಬರಾಜು ಆಗಲಿದೆ ಎಂದು ಹೇಳಿದರು.

ಇದಕ್ಕಾಗಿ ಶಾಸಕ ಶರತ್ ಬಚ್ಚೇಗೌಡ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೆ ತಾಲ್ಲೂಕಿನ ಜನರಿಗೆ ಶುದ್ದಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ 153 ವಾಟರ್ ಫಿಲ್ಟರ್‌ಗಳನ್ನು ತಾಲೂಕಿನಾದ್ಯಂತ ಅಳವಡಿಕೆ ಮಾಡಿದ್ದಾರೆ ಎಂದರು.

ನಗರಸಭೆ ಸದಸ್ಯ ಕೇಶವಮೂರ್ತಿ, ಗೌತಮ್, ಜಮುನಾ ಹರೀಶ್, ಪಿಎಲ್‌ಡಿ ಬ್ಯಾಂಕ್ ಅದ್ಯಕ್ಷ ವೆಂಕಟರಮಣಪ್ಪ, ವಾಸುದೇವಮೂರ್ತಿ, ಕೃಷ್ಣಪ್ಪ, ಬಿ.ವಿ.ಭೈರೇಗೌಡ, ವಿಷ್ಣುಭವನ್ ಮಧು, ಸಗೀರ್, ಅರ್ಬಜ್, ಸಾಧಿಕ್, ಇಂಡೋ ಮಿಮ್ ಮುಖ್ಯಸ್ಥ ರಾಜುಗೌಡ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.