ADVERTISEMENT

ಹೊಸಕೋಟೆ: ಆಹಾರದಲ್ಲಿ ಕಾಣೆಯಾದ ಸಿರಿಧಾನ್ಯ; ಹೆಚ್ಚಿದ ಅನಾರೋಗ್ಯ

ಹೊಸಕೋಟೆಯಲ್ಲಿ ಸಾವಯವ ಸಿರಿಧಾನ್ಯ ನಡಿಗೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 15:50 IST
Last Updated 6 ಜನವರಿ 2025, 15:50 IST
ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ನಡಿಗೆ ನಡೆಯಿತು
ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ನಡಿಗೆ ನಡೆಯಿತು   

ಹೊಸಕೋಟೆ: ಅನಾದಿ ಕಾಲದಿಂದಲೂ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದ ಸಿರಿಧಾನ್ಯ ಬಳಕೆ ಕ್ಷೀಣಿಸಿದ ಪರಿಣಾಮ ಹಾಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಬೆಳೆದ ಆಹಾರ ಸೇವನೆಯಿಂದ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಜಿ.ಕಲಾವತಿ ಹೇಳಿದರು.

ಜಿಲ್ಲಾಡಳಿತ, ಕೃಷಿ ಇಲಾಖೆ ಮತ್ತು ತಾಲ್ಲೂಕು ಕೃಷಿಕ ಸಮಾಜದಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರು ಇಂದು ಒತ್ತಡದ ಜೀವನ ನಡೆಸುತ್ತಿದ್ದಾರೆ. ಇದರಿಂದ ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿವೆ. ಇವುಗಳ ನಿಯಂತ್ರಣಕ್ಕೆ ಹಲವು ರೀತಿಯಲ್ಲಿ ಜನ ಶ್ರಮ ಹಾಕುತ್ತಾರೆ. ಇದರ ಬದಲಿಗೆ ಉತ್ತಮ ಜೀವನ ಶೈಲಿ ಮತ್ತು ಸಿರಿಧಾನ್ಯ ಆಹಾರ ಸೇವನೆಯಿಂದ ರೋಗ ಬಾರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.

ADVERTISEMENT

ಕಾಲ ಬದಲಾದಂತೆ ಸಿರಿಧಾನ್ಯ ಬೆಳೆಯನ್ನು ನಿರ್ಲಕ್ಷ್ಯ ಮಾಡಿದ್ದೇವು. ಪ್ರಸ್ತುತ ಅವುಗಳ ಮಹತ್ವ ಅರಿತು ಅವುಗಳನ್ನು ಸಿರಿಧಾನ್ಯವೆಂದು ಕರೆಯುತ್ತಿದ್ದೇವೆ. ಇವುಗಳಿಂದ ಪ್ರತಿನಿತ್ಯ ಆಹಾರ ತಯಾರು ಮಾಡುವುದರಿಂದ ಆರೋಗ್ಯ ವೃದ್ಧತ್ತದೆ. ಮಕ್ಕಳನ್ನು ಆಕರ್ಷಿಸುವ ಪಿಜ್ಜಾ, ಮರ್ಗರ್ ಸೇರಿದಂತೆ ಹಲವು ಕುರುಕಲು ತಿಂಡಿಗಳನ್ನು ತಯಾರಿಸಬಹುದು ಎಂದು ತಿಳಿಸಿದರು.

ಡಾ.ಮಂಜುನಾಥ್ ಅವರು ‘ಮಾನವನ ಆರೋಗ್ಯದಲ್ಲಿ ಸಿರಿಧಾನ್ಯಗಳ ಪಾತ್ರ’ ಕುರಿತು ಮಾತನಾಡಿ, ಸಕ್ಕರೆ ಕಾಯಿಲೆ, ಬಿಪಿ ಜೊತೆಗೆ ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ಹಲವು ಕಾಯಿಲೆಗಳಿಗೆ ಸಿರಿಧಾನ್ಯಗಳು ರಾಮ ಭಾಣವಾಗಿದೆ ಎಂದರು.

ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಜಿ.ಕಲಾವತಿ.

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆರಂಭವಾದ ನಡಿಗೆ ಕೃಷಿ ಇಲಾಖೆಯ ಮೂಲಕ, ಜಯಚಾಮರಾಜೇಂದ್ರ ವೃತ್ತ, ಹಳೆ ಬಸ್ ನಿಲ್ದಾಣ, ಮಾರ್ಗವಾಗಿ ಕುರುಬರ ಪೇಟೆ, ಜೆಸಿ ವೃತ್ತ, ಕೆಇಬಿ ಕಚೇರಿ, ಸರ್ಕಾರಿ ಬಾಲಕಿಯ ಪ್ರೌಢಶಾಲೆ ಮೂಲಕ ಮತ್ತೆ ಕ್ರೀಡಾಂಗಣದಲ್ಲಿ ಕೊನೆಗೊಂಡಿದೆ.

ಭಿತ್ತಿ ಚಿತ್ರಗಳನ್ನು ಹಿಡಿದುಕೊಂಡ ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿರಿಧಾನ್ಯಗಳ ಮಹತ್ವ ಸಾರುವ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿದರು.

ತಾ.ಪಂ ಇಒ ಸಿ.ಎನ್.ನಾರಾಯಣಸ್ವಾಮಿ, ಬಿಇಒ ಎಸ್.ಕೆ.ಪದ್ಮನಾಭ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಿ.ಚಂದ್ರಪ್ಪ, ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್, ಕೃಷಿಕ ಸಮಾಜದ ಅಧ್ಯಕ್ಷ ಖಾಜಿ ಹೊಸಹಳ್ಳಿ ಹರೀಶ್ ಕುಮಾರ್, ಡಿಡಿಎ ಎಂ.ಗಾಯತ್ರಿ, ಕೃಷಿ ಅಧಿಕಾರಿ ರಾಮಾಂಜನೇಯ, ಕೃಷಿ ತಾಂತ್ರಿಕ ವ್ಯವಸ್ಥಾಪಕ ವಿಧ್ಯಾದರ್ ಹಾಜರಿದ್ದರು.

23ರಿಂದ ಸಿರಿಧಾನ್ಯ ಮೇಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.23 ರಿಂದ 25ರವರೆಗೆ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಜಿ.ಕಲಾವತಿ ಮನವಿ ಮಾಡಿದರು.

ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯಗಳ ನಡಿಗೆ 2025 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಅಧಿಕಾರಿಗಳು ಮತ್ತು ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.