ADVERTISEMENT

ಹೊಯ್ಸಳ ಶೈಲಿಯ ಚನ್ನಕೇಶವ ದೇವಾಲಯ

800ವರ್ಷಗಳಿಗೂ ಹೆಚ್ಚಿನ ಇತಿಹಾಸ * ಪ್ರಾಚೀನ ಶೈಲಿಯಲ್ಲಿಯೇ ಈಚೆಗೆ ಪುನರುಜ್ಜೀವನ

ಆನೇಕಲ್ ಶಿವಣ್ಣ
Published 20 ಏಪ್ರಿಲ್ 2019, 20:00 IST
Last Updated 20 ಏಪ್ರಿಲ್ 2019, 20:00 IST
ಹಾರಗದ್ದೆ ಚನ್ನಕೇಶವ ಸ್ವಾಮಿ ದೇವಾಲಯದ ನೋಟ
ಹಾರಗದ್ದೆ ಚನ್ನಕೇಶವ ಸ್ವಾಮಿ ದೇವಾಲಯದ ನೋಟ   

ಆನೇಕಲ್ : ಹಾರಗದ್ದೆ ಹಲವು ದೇಗುಲಗಳನ್ನು ಹೊಂದಿರುವ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಗ್ರಾಮ. ಭೂನೀಳ ಸಮೇತ ಚನ್ನಕೇಶವಸ್ವಾಮಿ ದೇವಾಲಯ ಈ ಗ್ರಾಮಕ್ಕೆ ಕಳಶವಿಟ್ಟಂತಿದೆ.

ದೇವಾಲಯ ವಿಶಾಲವಾದ ಪ್ರಾಂಗಣ, ಕುಸುರಿ ಕೆತ್ತನೆಗಳುಳ್ಳ ರಾಜಗೋಪುರ ಹಾಗೂ ಸುಂದರವಾದ ಚನ್ನಕೇಶವಮೂರ್ತಿ ಹೊಂದಿದೆ. ಈ ದೇಗುಲ ಸಾವಿರಾರು ಭಕ್ತ ಹರಕೆ ಈಡೇರಿಸುತ್ತಾ ಬಂದಿದೆ. ಆನೇಕಲ್ ಮಾತ್ರವಲ್ಲದೇ ಕನಕಪುರ, ಬೆಂಗಳೂರಿನಲ್ಲೂ ಈ ದೇಗುಲಕ್ಕೆ ಭಕ್ತರಿದ್ದಾರೆ. ಸುಮಾರು 12ನೇ ಶತಮಾನದ ಈ ದೇವಾಲಯ ತಲಾ ತಲಾಂತರಗಳಿಂದಲೂ ಈ ಭಾಗದ ಭಕ್ತರ ನಂಬಿಕೆ ತಾಣವಾಗಿದೆ.

ಬೆಂಗಳೂರು-ಬನ್ನೇರುಘಟ್ಟ ಮಾರ್ಗವಾಗಿ ಆನೇಕಲ್ ರಸ್ತೆಯ ಜಿಗಣಿ ಹೋಬಳಿಯ ಹಾರಗದ್ದೆಯನ್ನು ಹೊಯ್ಸಳರ ಕಾಲದಲ್ಲಿ ಪಾರಂಗಳನಿ ಎಂದು ಕರೆಯಲಾಗುತ್ತಿತ್ತು. ಪಾರಂಗಳನಿ ಎಂದರೆ ಬ್ರಾಹ್ಮಣರ ಗದ್ದೆಗಳು. ಇದೇ ಕ್ರಮೇಣ ಹಾರುವರ ಗದ್ದೆ, ಹಾರಗದ್ದೆ ಎಂದು ಸ್ಥಳ ಪುರಾಣದಲ್ಲಿ ಹೇಳಲಾಗುತ್ತದೆ. ಖಗ್ಗಪುರಿ ಎಂದೂ ಸಹ ಈ ಗ್ರಾಮವನ್ನು ಕರೆಯಲಾಗುತ್ತಿತ್ತು ಎಂದು ಸ್ಥಳೀಯ ಶಾಸನಗಳಲ್ಲಿ ತಿಳಿದು ಬರುತ್ತದೆ.

ADVERTISEMENT

ಶತಮಾನಗಳ ಹಿಂದೆ ಈ ಗ್ರಾಮದಲ್ಲಿ ಪಂಡಿತರು ನೆಲೆಸಿದ್ದು ವೇದೋಪನಿಷತ್, ಪುರಾಣ ಪುಣ್ಯಕಥೆಗಳು, ಮಂತ್ರೋಚ್ಛಾರ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿತ್ತು ಎಂಬ ಮಾಹಿತಿಯೂ ಇಲ್ಲಿ ಲಭ್ಯವಾಗಿದ್ದು ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು.

ಕ್ರಿ.ಶ.1200ರಲ್ಲಿ ಹೊಯ್ಸಳರು ದ್ರಾವಿಡ ಶೈಲಿಯ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಗೋಪುರ, ವಿಶಾಲವಾದ ಪ್ರಾಂಗಣ ಹಾಗೂ ಎತ್ತರವಾದ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.

ಸುಮಾರು 800 ವರ್ಷಗಳಿಗೂ ಹೆಚ್ಚಿನ ಇತಿಹಾಸವುಳ್ಳ ಚನ್ನಕೇಶವಸ್ವಾಮಿ ದೇವಾಲಯವನ್ನು ಪ್ರಾಚೀನ ಶೈಲಿಯಲ್ಲಿಯೇ ಈಚೆಗೆ ಪುನರುಜ್ಜೀವನಗೊಳಿಸಲಾಗಿದೆ. ಸಂಪೂರ್ಣ ಕಲ್ಲಿನಲ್ಲಿ ಕೆತ್ತಲಾಗಿರುವ ನೆಲಮಟ್ಟದಿಂದ 72 ಅಡಿ ಎತ್ತರವಿರುವ ಗೋಪುರ ಬೇಲೂರಿನ ಚನ್ನಕೇಶವ ದೇವಾಲಯದ ಗೋಪುರ ಹೋಲುತ್ತದೆ. ದೇವಾಲಯದ ಸುತ್ತಲೂ ಎತ್ತರವಾದ ಪೌಳಿಗೋಡೆಯಿದೆ.

ವಿಶಾಲವಾದ ಹಜಾರ, ದೇವಾಲಯದ ಪ್ರದಕ್ಷಿಣೆ ಪ್ರಾಂಗಣವು ವಿಶಾಲವಾಗಿದ್ದು ಪ್ರಾಂಗಣದುದ್ದಕ್ಕೂ ಗಣಪತಿ ದೇವಾಲಯ, ಅನ್ನಪೂರ್ಣೇಶ್ವರಿ ದೇವಾಲಯ, ಆಂಜನೇಯಸ್ವಾಮಿ ದೇವಾಲಯ ಹಾಗೂ ಯಾಗಶಾಲೆಯಿದೆ. ವಿಶಾಲ ಸ್ಥಳದಲ್ಲಿ ಕುಳಿತು ಭಕ್ತರು ದೇವಾಲಯದ ಪ್ರಾಂಗಣದಲ್ಲಿ ನಡೆಯುವ ಉತ್ಸವ, ಭಜನೆ, ಧಾರ್ಮಿಕ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಅತ್ಯಂತ ಕೌಶಲದಿಂದ ನಿರ್ಮಿಸಲಾಗಿದೆ.

ಚನ್ನಕೇಶವಸ್ವಾಮಿ ದೇವಾಲಯ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರವಲ್ಲದೇ ಸಾಹಿತ್ಯ ಕ್ಷೇತ್ರದಲ್ಲೂ ಹೆಜ್ಜೆ ಗುರುತು ಮೂಡಿಸಿದೆ. 17ನೇ ಶತಮಾನದಲ್ಲಿ ಹಾರಗದ್ದೆಯಲ್ಲಿ ಲಕ್ಷ್ಮ ಎಂಬ ಕವಿ ಇದ್ದ. ಈ ಕವಿ ರಚಿಸಿರುವ ರುಕ್ಮಾಂಗದ ಚರಿತ್ರೆ, ಚನ್ನನ ನೀತಿ ಕಂದ, ಲಕ್ಷ್ಮಭಾರತ ಕೃತಿಗಳು ಲಭ್ಯವಿದ್ದು ಪ್ರಸಿದ್ಧಿ ಪಡೆದಿವೆ. ಚನ್ನನ ನೀತಿ ಕಂದ ಕೃತಿಯು ಸುಮಾರು 250 ಕಂದಗಳನ್ನು ಹೊಂದಿದ್ದು ಇದೊಂದು ನೀತಿ ಗ್ರಂಥವಾಗಿದೆ. ಕಂದಪದ್ಯಗಳಲ್ಲಿ ಖಗಪುರಿ ಚನ್ನ ಹಾಗೂ ಹಾರಗದ್ದೆ ಚನ್ನಿಗರಾಜ ಎಂಬ ಅಂಕಿತವನ್ನು ಹೊಂದಿರುವುದು ವಿಶೇಷ. ಲಕ್ಷ್ಮ ಭಾರತ ಕೃತಿಯು ಸುಮಾರು 4000ಕ್ಕೂ ಪದ್ಯಗಳಿರುವ ಕೃತಿಯಾಗಿದ್ದು ಕನ್ನಡದ ಕಾವ್ಯ ಕೃತಿಗಳಲ್ಲಿ ಸ್ಥಾನ ಪಡೆದಿದೆ.

ಲಕ್ಷ್ಮ ಕವಿ ಚನ್ನಕೇಶವಸ್ವಾಮಿ ಮಹಾ ಭಕ್ತನಾಗಿರುವುದು ಅವರ ಕೃತಿಗಳಿಂದ ತಿಳಿದು ಬರುತ್ತದೆ. 17ನೇ ಶತಮಾನದಲ್ಲಿ ಹಾರಗದ್ದೆಯ ರಾಮಚಂದ್ರ ಎಂಬುವವರಿಗೆ ಲಕ್ಷ್ಮೀ ವರದಿಂದ ಪುತ್ರಸಂತಾನವಾಯಿತು. ಹಾಗಾಗಿ ಲಕ್ಷ್ಮ ಎಂದೇ ನಾಮಕರಣ ಮಾಡಲಾಯಿತು. ಆದರೆ, ಬಾಲಕನಿಗೆ ವಿದ್ಯೆ ಹತ್ತಲಿಲ್ಲ. ಗುರು ದೇಶೀಕೊತ್ತಮರ ಸಲಹೆಯಂತೆ ಚನ್ನಕೇಶವಸ್ವಾಮಿ ಮೊರೆ ಹೋದಾಗ ಲಕ್ಷ್ಮನಿಗೆ ದೈವಾನುಗ್ರಹವಾಗಿ ಪಂಡಿತನಾಗಿ ಪರಿವರ್ತನೆ ಹೊಂದಿದ. ಈ ಲಕ್ಷ್ಮನೇ ಲಕ್ಷ್ಮ ಕವಿಯೆಂದು ಖ್ಯಾತಿ ಪಡೆದಿರುವುದು ಚನ್ನಕೇಶವಸ್ವಾಮಿ ಪವಾಡಕ್ಕೆ ಸಾಕ್ಷಿಯಾಗಿದೆ.

ಈ ದೇವಾಲಯವು ಗ್ರಾಮದ ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಿದೆ. ಎಂಟು ಶತಮಾನಗಳಿಗೂ ಹೆಚ್ಚು ಕಾಲದಿಂದ ಗ್ರಾಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಗ್ರಾಮದಲ್ಲಿ ಇತ್ತೀಚಿಗೆ ರಾಜರಾಜೇಶ್ವರಿ ದೇವಾಲಯವನ್ನು ಸಹ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.