ADVERTISEMENT

ಹೊಸಕೋಟೆ: ಒಕ್ಕಲಿಗರ ಸಂಘ ಒಡೆಯಲು ಹುನ್ನಾರ

ಹೊಸಕೋಟೆ ತಾಲ್ಲೂಕು ಸಂಘದ ಪದಾಧಿಕಾರಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 7:31 IST
Last Updated 26 ಜೂನ್ 2022, 7:31 IST
ಹೊಸಕೋಟೆಯಲ್ಲಿ ಒಕ್ಕಲಿಗರ ಸಂಘದಿಂದ ನಡೆಯುವ ಕೆಂಪೇಗೌಡ ಜಯಂತಿಯ ಭಿತ್ತಿಪತ್ರಗಳನ್ನು ಸಂಘದ ಅಧ್ಯಕ್ಷ ಮುನಿರಾಜು, ಮುಖಂಡರಾದ ದೊಡ್ಡಹುಲ್ಲೂರು ಮಂಜುನಾಥ್, ಹನುಮಂತೇಗೌಡ, ನಾರಾಯಣಗೌಡ ಬಿಡುಗಡೆಗೊಳಿಸಿದರು
ಹೊಸಕೋಟೆಯಲ್ಲಿ ಒಕ್ಕಲಿಗರ ಸಂಘದಿಂದ ನಡೆಯುವ ಕೆಂಪೇಗೌಡ ಜಯಂತಿಯ ಭಿತ್ತಿಪತ್ರಗಳನ್ನು ಸಂಘದ ಅಧ್ಯಕ್ಷ ಮುನಿರಾಜು, ಮುಖಂಡರಾದ ದೊಡ್ಡಹುಲ್ಲೂರು ಮಂಜುನಾಥ್, ಹನುಮಂತೇಗೌಡ, ನಾರಾಯಣಗೌಡ ಬಿಡುಗಡೆಗೊಳಿಸಿದರು   

ಹೊಸಕೋಟೆ: ‘ನಗರದ ಹಳೆಯ ಬಸ್ ನಿಲ್ದಾಣದಲ್ಲಿ ಜೂನ್‌ 29ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಹಮ್ಮಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜು (ಹೆಗಡೆ) ತಿಳಿಸಿದರು.

ನಗರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಲವಾರು ವರ್ಷಗಳಿಂದ ತಾಲ್ಲೂಕು ಒಕ್ಕಲಿಗರ ಸಂಘದಿಂದ ಕೆಂಪೇಗೌಡರ ಜಯಂತ್ಯುತ್ಸವ ಆಚರಿಸಿಕೊಂಡು ಬರಲಾಗಿದೆ. ಈ ಬಾರಿಯೂ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ತಾಲ್ಲೂಕಿನಾದ್ಯಂತ ಸುಮಾರು 80 ರಥಗಳು ಆಗಮಿಸಲಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಆ ನಂತರ ಕೆಂಪೇಗೌಡರ ಪ್ರತಿಮೆ ಬಳಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ವಿವರಿಸಿದರು.

ADVERTISEMENT

ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಕುಮಾರ್‌ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳು ಸ್ವಾಮೀಜಿಗಳು ಸಾನ್ನಿಧ್ಯವಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಂಸದ ಬಿ.ಎನ್. ಬಚ್ಚೇಗೌಡ, ಮಾಜಿ ಸಚಿವರಾದ ಕೃಷ್ಣ ಭೈರೇಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.

ಹಳೆಯ ಬಸ್ ನಿಲ್ದಾಣದಲ್ಲಿ ಸಂಘ ಹಾಗೂ ತಾಲ್ಲೂಕಿನ ಕುಲಬಾಂಧವರ ಸಹಾಯದಿಂದ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಾಗಿದೆ. ಇದಕ್ಕೆ ಯಾವುದೇ ರಾಜಕಾರಣಿಗಳ ಬಳಿ ಹಣ ಪಡೆದಿಲ್ಲ. ಈಗ ಕೆಲವರು ತಾವೇ ಅದನ್ನು ನಿರ್ಮಿಸಿರುವುದಾಗಿ ಹೇಳುತ್ತಾ ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಈ ಮುಂಚೆ ತಾಲ್ಲೂಕಿನಲ್ಲಿ ಎರಡು ಒಕ್ಕಲಿಗರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದವು. ಕೆಲವು ವರ್ಷಗಳ ಹಿಂದೆ ಸಮುದಾಯದ ಪ್ರಮುಖರು ಸೇರಿ ಎರಡೂ ಸಂಘಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಒಗ್ಗೂಡಿಸಿದರು. ರಾಜಕೀಯ ಹಿತಾಸಕ್ತಿಗಳಿದ್ದರೆ ಚುನಾವಣಾ ಸಂದರ್ಭದಲ್ಲಿ ತಮಗೆ ಬೇಕಾದವರ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು. ಅದರಂತೆ ಸಂಘ ನಡೆಯುತ್ತಿತ್ತು ಎಂದರು.

ಈಗ ಕೆಲವು ರಾಜಕಾರಣಿಗಳು 5 ಎಕರೆ ಜಾಗ ಕೊಡಿಸಿ ತಮ್ಮ ಸ್ವಂತ ಹಣದಿಂದ ಸಮುದಾಯ ಭವನ ಕಟ್ಟಿಸುವುದಾಗಿ ತಿಳಿಸಿ ಸಂಘದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಇದು ಶೋಚನೀಯ ಸಂಗತಿ. ಸಮಾಜ ಬಾಂಧವರು ಎಚ್ಚೆತ್ತುಕೊಂಡು ಸಮಾಜ ಒಡೆಯದೆ ಎಲ್ಲರೂ ಸೇರಿ ಕೆಂಪೇಗೌಡರ ಜಯಂತಿ ಆಚರಿಸಬೇಕು ಎಂದು ಕೋರಿದರು.

ತಾಲ್ಲೂಕು ಒಕ್ಕಲಿಗರ ಸಂಘದ ಮುಖಂಡ ಹನುಮಂತೇಗೌಡ ಮಾತನಾಡಿ, ಈಗಾಗಲೇ ತಾಲ್ಲೂಕಿನ ಹರಳೂರಿನ ಬಳಿ ಒಕ್ಕಲಿಗರ ಸಂಘಕ್ಕಾಗಿ 3.1 ಎಕರೆ ಸ್ಥಳ ಮೀಸಲಿಡಲಾಗಿದೆ. ಕೆಲವೇ ದಿನಗಳಲ್ಲಿ ತಾಲ್ಲೂಕಿನ ಜನತೆಯ ಸಹಕಾರದಿಂದ ಸಮುದಾಯ ಭವನ ನಿರ್ಮಿಸಲಾಗುತ್ತದೆಎಂದರು.

ಈ ಎಲ್ಲಾ ಕೆಲಸಗಳಿಗೆ ತಾಲ್ಲೂಕಿನ ಒಕ್ಕಲಿಗ ಸಮುದಾಯದವರು ಲಕ್ಷಾಂತರ ರೂಪಾಯಿ ನೀಡಿದ್ದಾರೆ. ಕೆಲವರು ತಾವೇ ಆ ಕೆಲಸ ಮಾಡಿಸಿರುವುದಾಗಿ ಸಾಮಾಜಿಕ ಜಾಲ ತಾಣದಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಟೀಕಿಸಿದರು.

ಬಮೂಲ್ ನಿರ್ದೇಶಕ ಹುಲ್ಲೂರು ಸಿ. ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಾ ಒಕ್ಕಲಿಗರು ಒಟ್ಟಾಗಿದ್ದಾರೆ. ಆದರೆ, ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಸಂಘವನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಸಮುದಾಯದ ಯಾರೊಬ್ಬರು ಕಿವಿಗೊಡಬಾರದು. ಸಮಾಜದ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕೋರಿದರು.

ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರ್‌ ಗೌಡ, ಮುಖಂಡರಾದ ನಾರಾಯಣಗೌಡ, ಚಿಕ್ಕಹುಲ್ಲೂರು ಬಚ್ಚೇಗೌಡ, ನಂಜೇಗೌಡ, ಚೇತನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.