ದೊಡ್ಡಬಳ್ಳಾಪುರ: ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾದ ಹಿನ್ನೆಲೆಯಲ್ಲಿ 20 ದಿನದ ಅಂತರದಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಶುಕ್ರವಾರ ಗ್ರಾಮಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಬಕಾರಿ ಇನ್‌ಸ್ಪೆಕ್ಟರ್ ಬಿ.ವಿ.ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಎಚ್ಚರಿಕೆ ನೀಡಿದರು. ಮನೆ ಮತ್ತು ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದು ಕಾನೂನುಬಾಹಿರ. ಅಕ್ರಮ ಮದ್ಯ ಮಾರಾಟ ಮಾಡಿದ ಬಗ್ಗೆ ಮಾಹಿತಿ ಖಚಿತ ಮಾಹಿತಿ ದೊರೆತರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಗ್ರಾಮದಲ್ಲಿನ ಕೆಲವು ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದರು. ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಇದ್ದಲ್ಲಿ ಇಲಾಖೆ ಗಮನಕ್ಕೆ ತರುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಯ್ಯ ಮಾತನಾಡಿ, ‘ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಕೆಲವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರು. ಕೆಲವು ದಿನ ಮಾತ್ರ ಅಕ್ರಮ ಮದ್ಯ ಮಾರಾಟ ನಿಲ್ಲಿಸುತ್ತಾರೆ. ಮತ್ತೆ ಮಾರಾಟ ಆರಂಭಿಸುತ್ತಿದ್ದಾರೆ. ಗ್ರಾಮದಲ್ಲಿ 20 ದಿನಗಳ ಅಂತರದಲ್ಲಿ ಕುಡಿತದ ಚಟದಿಂದ ಗ್ರಾಮದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸದೇ ಇದ್ದರೆ ತಾಲ್ಲೂಕಿನ ಇತರೆ ಗ್ರಾಮಗಳಲ್ಲೂ ಸರಣಿ ಸಾವು ಪ್ರಾರಂಭವಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
ಮುಖಂಡ ತಿಮ್ಮೇಗೌಡ ಮಾಹಿತಿ ನೀಡಿ, ‘ಗ್ರಾಮದಲ್ಲಿ ಹೆಂಗಸರು, ಗಂಡಸರು, ಯುವಕರು ಸೇರಿದಂತೆ ಎಲ್ಲಾ ಜಾತಿಯ ಜನರು ಕುಡಿತದ ವ್ಯಸನಕ್ಕೆ ತುತ್ತಾಗಿದ್ದಾರೆ. ಇದರಿಂದ ಕುಟುಂಬಗಳಲ್ಲಿ ಕಲಹಗಳು ಹೆಚ್ಚಾಗುತ್ತಿವೆ. ನಡು ವಯಸ್ಸಿನಲ್ಲೇ ಜನ ಸಾಯುತ್ತಿದ್ದಾರೆ. ಸಣ್ಣಪುಟ್ಟ ಕಳ್ಳತನ ಹೆಚ್ಚಾಗುತ್ತಿವೆ’ ಎಂದರು.
ಅಬಕಾರಿ ಇಲಾಖೆ ಸಬ್ ಇನ್‌ಸ್ಪೆಕ್ಟರ್ ವಿನಯ್, ಸಿಬ್ಬಂದಿ ಹನುಮಂತರಾಜು, ಗೋಣಿಬಸಪ್ಪ, ಆಶಾರಾಣಿ, ಮುತ್ತಯ್ಯ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.