ADVERTISEMENT

‘ದೇಶದ ಸಮಸ್ಯೆಗಳಿಗೆ ಸಂವಿಧಾನ ಕಾರಣವಲ್ಲ’

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ‘62ನೇ ಪರಿನಿರ್ವಾಣ ದಿನಾಚರಣೆ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 12:50 IST
Last Updated 9 ಡಿಸೆಂಬರ್ 2018, 12:50 IST
ಅಂಬೇಡ್ಕರ್‌ ಪುತ್ಥಳಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು
ಅಂಬೇಡ್ಕರ್‌ ಪುತ್ಥಳಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು   

ದೇವನಹಳ್ಳಿ: ’ದೇಶದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಸಂವಿಧಾನ ಕಾರಣವಲ್ಲ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವವರ ನಿರ್ಲಕ್ಷ್ಯ ಕಾರಣ’ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅಭಿಪ್ರಾಯಪಟ್ಟರು.

ಅಂಬೇಡ್ಕರ್‌ ಭವನದಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ‘62ನೇ ಪರಿನಿರ್ವಾಣ ದಿನಾಚರಣೆ ಹಾಗೂ ರಾಜ್ಯಮಟ್ಟದ ಸರ್ವ ಸದಸ್ಯರ ಮಹಾಸಭೆ’ಯ ಎರಡನೇ ದಿನದ ಕಾರ್ಯಕ್ರಮದಲ್ಲಿ ’ಭಾರತೀಯ ಸಂವಿಧಾನದ ಮಹತ್ವ ಮತ್ತು ಹೊಣೆಗಾರಿಕೆ’ ವಿಷಯದ ಕುರಿತು ಮಾತನಾಡಿದರು.

‘1947 ರಲ್ಲಿ ಸ್ವಾತಂತ್ರ್ಯ ‌ಬಂದ ನಂತರ 1950ರಲ್ಲಿ ದೇಶದ ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ಎಲ್ಲ ಸ್ವಾತಂತ್ರ್ಯ ರಾಷ್ಟ್ರಗಳು ಗಣರಾಜ್ಯಗಳಲ್ಲ. ದೇಶದಲ್ಲಿ 600 ಪ್ರಾದೇಶಿಕ ರಾಜರು, ಮಹಾರಾಜರು, ಪಾಳೇಗಾರರು ಆಳುತ್ತಿದ್ದ ಸಂಸ್ಥಾನವನ್ನು ಒಗ್ಗೂಡಿಸಿ ಸಂವಿಧಾನದಡಿಯಲ್ಲಿ ತರಲಾಗಿದೆ. ಸಂವಿಧಾನವೆಂದರೆ ಕತೆ, ಕವಿತೆ, ಕಾದಂಬರಿಯಲ್ಲ, ದೇಶದ ಪ್ರಗತಿಯ ಮಾರ್ಗಸೂಚಿ. ದೇಶದಲ್ಲಿ ಅನೇಕ ಧರ್ಮ, ಜಾತಿ ನಂಬಿಕೆಯಿಂದ ಜೀವನ ನಡೆಸುತ್ತಿರುವವರ ಪರಂಪರೆಯನ್ನು ಪರಿಗಣಿಸಿ ಸಂವಿಧಾನವನ್ನು ರಚಿಸಲಾಗಿದೆ’ ಎಂದರು.

’ಇತ್ತೀಚೆಗೆ ಒಂದೇ ಧರ್ಮ, ಒಂದೇ ಜಾತಿ, ಒಂದೇ ಆಹಾರ, ಹೇರುವ ಪದ್ದತಿ ಆರಂಭವಾಗಿರುವುದು ಖೇದಕರ ಸಂಗತಿ. ದೇಶವನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶವೆಂದರೆ ಜನ ಅವರ ಇತಿಹಾಸ, ಧರ್ಮ, ಸಂಸ್ಕೃತಿ, ಜಾತಿ ಮತ್ತು ಅವುಗಳ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ‘ ಎಂದು ಹೇಳಿದರು.

’ದೇಶದಲ್ಲಿ 4,635 ಜಾತಿಗಳಿವೆ, ಸಂವಿಧಾನದಡಿಯಲ್ಲೇ ಕಲ್ಯಾಣ ರಾಜ್ಯದ ಪರಿಕಲ್ಪನೆ ಇದೆ. ಸ್ವಾತಂತ್ರ್ಯ ಸಿಗಬೇಕು ಎಂಬುದು ಕೇವಲ ರಾಜಕೀಯ ಉದ್ದೇಶವಲ್ಲ. ಸಾಮಾಜಿಕ ಮತ್ತು ಆರ್ಥಿಕತೆ, ಸ್ವಾವಲಂಬನೆಗಾಗಿ ಹೋರಾಟ ನಡೆದಿದೆ’ ಎಂದರು.

‘1920ರಲ್ಲಿ ಮೋತಿಲಾಲ್‌ ನೆಹರೂ, ಬ್ರಿಟಿಷರಿಗೆ ವರದಿ ನೀಡಿ ಪಾರ್ಲಿಮೆಂಟ್‌ ಮಾದರಿಯಲ್ಲಿ ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದ್ದರು. 1933ರಲ್ಲಿ ಜವಾಹರಲಾಲ್‌ ನೆಹರೂ ಆಗ್ರಹಿಸಿದ್ದರು. 1944 ರಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಒತ್ತಾಯಿಸಿತ್ತು. 1946ರಲ್ಲಿ ದೇಶದಲ್ಲಿನ 222 ಗಣ್ಯರು ಸೇರಿ ಡಾ.ಅಂಬೇಡ್ಕರ್‌ ನೇತೃತ್ವದಲ್ಲಿ ಸಂವಿಧಾನ ರಚನೆ ಸಮಿತಿ ಆಸ್ತಿತ್ವಕ್ಕೆ ಬಂದ ನಂತರ ವಿವಿಧ 64 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ ಅಂಬೇಡ್ಕರ್‌ 1949ರ ನ.6 ರಂದು ಸಂವಿಧಾನ ಸಮರ್ಪಣೆ ಮಾಡಿದರು‘ ಎಂದು ವಿವರಿಸಿದರು.

ADVERTISEMENT

‘ಅಂಬೇಡ್ಕರ್‌ ಅವರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ಸಾಮಾಜಿಕ ನ್ಯಾಯವೆಂದರೆ ಮೀಸಲಾತಿ ಅಲ್ಲ. ಜಾಗತೀಕರಣದತ್ತ ಹೆಜ್ಜೆ ಇಡುತ್ತಿರುವ ಕಾಲಘಟ್ಟದಲ್ಲಿ ಖಾಸಗೀಕರಣದ ಪೆಡಂಭೂತ ಆವರಿಸುತ್ತಿದೆ. ಇದರಿಂದ ಮೀಸಲಾತಿ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೆಲವೇ ದಿನಗಳಲ್ಲಿ ಸಂಸತ್ತಿನ ಖಾಸಗೀಕರಣವಾದರೂ ಅಚ್ಚರಿ ಪಡಬೇಕಾಗಿಲ್ಲ. ಸಂವಿಧಾನಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದೆ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಸಂವಿಧಾನ ಪುಸ್ತಕವನ್ನು ಸುಡಬಹುದು, ಸಂವಿಧಾನವನ್ನು ಅರ್ಥ ಮಾಡಿಕೊಂಡವರ ಭಾವನೆಗಳನ್ನು ಸುಡಲು ಸಾಧ್ಯವಿಲ್ಲ. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಯಾವುದೇ ಹುದ್ದೆಗಳ ನೇಮಕಾತಿಗೆ ಮೀಸಲಾತಿ ಇಲ್ಲ. ಮೆರಿಟ್‌ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ‘ ಎಂದರು.

ಡಿ.ಎಸ್.ಎಸ್ ರಾಜ್ಯ ಘಟಕ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ವಿಭಾಗೀಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ರಮೇಶ್ ಡಾಕುಳಗಿ, ರಾಜ್ಯ ಸಂಘಟನಾ ಸಂಚಾಲಕರಾದ ಈರೇಶ್ ಹಿರೇಹಳ್ಳಿ, ನಾಗಣ್ಣ ಬಡಿಗೇರ, ಗೌತಮ ಪಾಟೀಲ್, ಮಲ್ಲೇ ಅಂಬುಗ, ಅರ್ಜುನ್ ಗೊಬ್ಬರು, ಸಾಹಿತಿ ಗೊಲ್ಲಹಳ್ಳಿ ಶಿವಪ್ರಕಾಶ, ಜಿಲ್ಲಾ ಸಂಘಟನಾ ಸಂಚಾಲಕರಾದ ಬಿಸ್ನಳ್ಳಿ ಮೂರ್ತಿ, ಕೊರಳೂರು ಶ್ರೀನಿವಾಸ್, ನಾರಾಯಣಸ್ವಾಮಿ, ತಿಮ್ಮರಾಯಪ್ಪ, ರಾಜು ಸಣ್ಣಕ್ಕಿ, ಎಚ್.ಕೆ. ವೆಂಕಟೇಶಪ್ಪ, ತಾಲ್ಲೂಕು ಪ್ರಧಾನ ಸಂಚಾಲಕ ನರಸಪ್ಪ, ಸಂಘಟನಾ ಸಂಚಾಲಕರಾದ ಪಿ.ಮುನಿರಾಜು, ವಿ. ರಮೇಶ್, ರವಿಕುಮಾರ್, ಗಣೇಶ್, ಸಿ. ಬಿ. ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.