ADVERTISEMENT

ಅನಿವಾರ್ಯವಾದ ನೀರು ಶುದ್ಧೀಕರಣ ಘಟಕ

ದುರ್ಗಾತಾಯಿ ಕಾಲೊನಿಯಲ್ಲಿ ಘಟಕ ಉದ್ಘಾಟಿಸಿದ ಪುರಸಭಾ ಮುಖ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:36 IST
Last Updated 14 ಅಕ್ಟೋಬರ್ 2019, 21:36 IST
ವಿಜಯಪುರದ ದುರ್ಗಾತಾಯಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪೌರಕಾರ್ಮಿಕ ಮಹಿಳೆಯರು ಉದ್ಘಾಟನೆ ಮಾಡಿದರು
ವಿಜಯಪುರದ ದುರ್ಗಾತಾಯಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪೌರಕಾರ್ಮಿಕ ಮಹಿಳೆಯರು ಉದ್ಘಾಟನೆ ಮಾಡಿದರು   

ವಿಜಯಪುರ: ಕೊಳವೆಬಾವಿಗಳ ಮೂಲಕ ಅಂತರಾಳದಿಂದ ನೀರು ತೆಗೆದುಕೊಂಡರೂ ಅವು ಕುಡಿಯಲಿಕ್ಕೆ ಯೋಗ್ಯವಲ್ಲದ ಕಾರಣದಿಂದಾಗಿ ಜನರ ಆರೋಗ್ಯದ ದೃಷ್ಟಿಯಿಂದ ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆ ಅನಿವಾರ್ಯವಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್‌ಕುಮಾರ್ ಹೇಳಿದರು.

ಇಲ್ಲಿನ ದುರ್ಗಾತಾಯಿ ಕಾಲೊನಿಯಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಕೊಳವೆಬಾವಿಗಳಿಂದ ಪಡೆಯುತ್ತಿರುವ ನೀರಿನಲ್ಲಿ ಪ್ಲೋರೈಡ್‌ನ ಅಂಶ ಹೆಚ್ಚಾಗಿರುವ ಕಾರಣ, ಈ ನೀರನ್ನು ನೇರವಾಗಿ ಕುಡಿಯುವುದರಿಂದ ಮೂಳೆ, ದಂತಗಳ ಸಮಸ್ಯೆ ಸೇರಿದಂತೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಅನಿವಾರ್ಯವಾಗಿ ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ADVERTISEMENT

ಜನರು ಇಲ್ಲಿ ಸಿಗುವಂತಹ ನೀರನ್ನು ಮಿತ ಬಳಕೆ ಮಾಡಿಕೊಳ್ಳಬೇಕು. ಜಲಶಕ್ತಿ ಅಭಿಯಾನದಡಿ ಬೀದಿನಾಟಕ ಸೇರಿದಂತೆ ಹಲವಾರು ರೀತಿಯಲ್ಲಿ ಜನರಿಗೆ ನೀರಿನ ಮಹತ್ವ, ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡು ಮಳೆಯ ನೀರು ಸಂಗ್ರಹಣೆಗೆ ಆದ್ಯತೆ ನೀಡುವಂತೆಯೂ ತಿಳಿವಳಿಕೆ ನೀಡಲಾಗಿದೆ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ಸಾರ್ವಜನಿಕರು ನೀರನ್ನು ಅವಶ್ಯಕತೆಗನುವಾಗಿ ಮಿತವಾಗಿ ಬಳಸಬೇಕು. ಈ ಮೂಲಕ ಅಂತರ್ಜಲ ರಕ್ಷಣೆಗೆ ಮುಂದಾಗಬೇಕು. ಗಿಡ-ಮರಗಳ ನಾಶದಿಂದ ಮತ್ತು ಪ್ರಕೃತಿ ವಿಕೋಪದಿಂದ ಕಾಡುಗಳು ನಾಶವಾಗುತ್ತಿವೆ. ಇದರಿಂದಾಗಿ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ದಿಸೆಯಲ್ಲಿ ಎಲ್ಲರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

‘12 ನೇ ವಾರ್ಡಿನ ದುರ್ಗಾತಾಯಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ವಿರೋಧಗಳಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಘಟಕ ನಿರ್ಮಾಣಕ್ಕೆ ಸಹಕಾರ ನೀಡಿದ್ದೇವೆ. ಸ್ಥಳೀಯರಿಗೆ ಇದು ಅನುಕೂಲವೂ ಆಗಲಿದೆ. ಪುರಸಭೆಯ ಅಧಿಕಾರಿಗಳು ಸೌಜನ್ಯಕಾದರೂ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಅಪಮಾನ ಮಾಡಿದ್ದಾರೆ’ ಎಂದು ವಾರ್ಡಿನ ಪುರಸಭಾ ಮಾಜಿ ಸದಸ್ಯೆ ಅರುಣಾ ತಿರುಮಲೇಶ್ ಆರೋಪಿಸಿದರು.

ಮುಖಂಡರಾದ ವಿ.ಎಂ. ನಾಗರಾಜ್, ಜೆ.ಎನ್. ಶ್ರೀನಿವಾಸ್, ಗೌಸ್‌ಖಾನ್, ಎಚ್.ಎಂ.ಕೃಷ್ಣಪ್ಪ, ಮುನಿರಾಜು, ಎಂಜಿನಿಯರ್‌ಗಳಾದ ಮಹೇಶ್‌ಕುಮಾರ್, ಸುಪ್ರಿಯಾರಾಣಿ, ಗಜೇಂದ್ರ, ಕಂದಾಯ ನಿರೀಕ್ಷಕ ಜಯಕಿರಣ್, ಸಿಬ್ಬಂದಿ ಸರಸ್ವತಮ್ಮ, ಗೋಪಾಲ್, ಲಕ್ಷ್ಮೀನಾರಾಯಣ, ಶಿವನಾಗೇಗೌಡ, ಮಂಜುನಾಥ್, ನಾರಾಯಣಸ್ವಾಮಿ, ಮೂರ್ತಿ, ಮುರಳಿ, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.