ADVERTISEMENT

ಇಂಡೋ – ಟಿಬೆಟಿಯನ್ ಪೊಲೀಸರ ಸಂಸ್ಥಾಪನಾ ದಿನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 14:22 IST
Last Updated 24 ಅಕ್ಟೋಬರ್ 2018, 14:22 IST
ವಿಜಯಪುರದ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ಕಾರ್ಯಾಲಯದ ಆವರಣದಲ್ಲಿ ಕಮಾಂಡೆಂಟ್ ಸೆಂದೀಲ್ ಕುಮಾರ್ ಅವರು ಸಿಬ್ಬಂದಿಯನ್ನು ಪರಿಚಯಿಸಿಕೊಂಡರು
ವಿಜಯಪುರದ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ಕಾರ್ಯಾಲಯದ ಆವರಣದಲ್ಲಿ ಕಮಾಂಡೆಂಟ್ ಸೆಂದೀಲ್ ಕುಮಾರ್ ಅವರು ಸಿಬ್ಬಂದಿಯನ್ನು ಪರಿಚಯಿಸಿಕೊಂಡರು   

ವಿಜಯಪುರ: ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಕೇವಲ ಇಂಡೋ–ಚೀನಾ ದೇಶಗಳ ಗಡಿಭಾಗದಲ್ಲಿಯಷ್ಟೇ ಕಾರ್ಯನಿರ್ವಹಣೆ ಮಾಡದೆ ಆಂತರಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕಮಾಂಡೆಂಟ್ ಸೆಂದೀಲ್ ಕುಮಾರ್ ತಿಳಿಸಿದರು.

ಇಲ್ಲಿನ ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ವತಿಯಿಂದ ಬುಧವಾರ 57ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

1962ರ ಅ.24ರಂದು ಈ ಸಂಸ್ಥೆ ಸ್ಥಾಪನೆಯಾಗಿದ್ದು, ಇಂಡೋ–ಚೀನಾ ಗಡಿಯಲ್ಲಿ 3488 ಕೀ.ಮೀ. ವ್ಯಾಪ್ತಿಯ ರಕ್ಷಣೆಗಾಗಿ ಕ್ರಿಯಾಶೀಲವಾಗಿದೆ. ಜೊತೆಗೆ ನಕ್ಸಲ್ ವಿರೋಧಿ ಅಭಿಯಾನ ನಡೆಸುತ್ತಿದೆ. ರಾಷ್ಟ್ರಪತಿ ಭವನ, ತಿಹಾರ್ ಜೈಲ್ ರಕ್ಷಣೆ, ಮಾನಸ ಸರೋವರ ಯಾತ್ರೆಗೆ ಬರುವ ನಾಗರಿಕರ ರಕ್ಷಣೆ, ಅಮರನಾಥ ಯಾತ್ರೆಗೆ ಬರುವ ಭಕ್ತರಿಗೆ ಭದ್ರತೆ ಒದಗಿಸುವುದು, ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದೂ ಕರ್ತವ್ಯವಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಅತಿ ಗಣ್ಯರ ರಕ್ಷಣೆ, ವಿಶ್ವಸಂಸ್ಥೆ ಶಾಂತಿಧೂತ ಸಂಸ್ಥೆ, ಅಫ್ಗಾನಿಸ್ತಾನ, ಆಫ್ರಿಕಾ, ಕಾಂಗೋ, ಶ್ರೀಲಂಕಾ ಮುಂತಾದ ರಾಯಭಾರಿ ಕಚೇರಿಗಳಲ್ಲಿ ರಕ್ಷಣೆ ನೀಡುವುದು, ಬಡದೇಶಗಳಲ್ಲಿ ಮಾವೋವಾದಿಗಳ ಹಾವಳಿ ಇರುವ ಕಡೆಗಳಲ್ಲಿ ರಕ್ಷಣೆ, ಪ್ರಾಕೃತಿಕ ವಿಕೋಪಗಳಾದಂತಹ ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವುದು ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.

ಸಂಸ್ಥಾಪನಾ ದಿನಾಚರಣೆ‌ ಅಂಗವಾಗಿ ಇಲ್ಲಿನ ಸಿಬ್ಬಂದಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಐಟಿಬಿಪಿ, ಮಹಾನಿರ್ದೇಶಕ ಆರ್.ಕೆ.ಪಚ್ನಾಂದ, ಮಹಾ‌ನಿರೀಕ್ಷಕ ದೇವಿಂದರ್ ಸಿಂಗ್, ಉಪಮಹಾನಿರೀಕ್ಷಕ ಸಂಜಯ್ ಕೊಟಾರಿ, ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.