ADVERTISEMENT

ಪೆಟ್ಟಿಗೆ ಅಂಗಡಿ ತೆರವಿಗೆ ಒತ್ತಾಯ

ವಾಹನ ಸಂಚಾರಕ್ಕೆ ತೊಂದರೆ: ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 3:03 IST
Last Updated 2 ಆಗಸ್ಟ್ 2021, 3:03 IST
ವಿಜಯಪುರ ಪಟ್ಟಣದ ಹಳೇ ಪುರಸಭೆ ಮುಂಭಾಗದಲ್ಲಿ ಅನಧಿಕೃತವಾಗಿ ತಂದಿಟ್ಟಿರುವ ಅಂಗಡಿ
ವಿಜಯಪುರ ಪಟ್ಟಣದ ಹಳೇ ಪುರಸಭೆ ಮುಂಭಾಗದಲ್ಲಿ ಅನಧಿಕೃತವಾಗಿ ತಂದಿಟ್ಟಿರುವ ಅಂಗಡಿ   

ವಿಜಯಪುರ:ಪಟ್ಟಣದಲ್ಲಿ ಜನಸಂಖ್ಯೆ ಹಾಗೂ ವಾಹನ ಸಂಚಾರ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಅಂಗಡಿಗಳನ್ನು ತೆರವುಗೊಳಿಸಿದ್ದರೂ ನಾಡ ಕಚೇರಿ ಮುಂಭಾಗದ ರಸ್ತೆಯ ಪಕ್ಕದಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಯೊಂದನ್ನು ತಂದು ಇಟ್ಟಿದ್ದಾರೆ. ಪುರಸಭೆ ಅಧಿಕಾರಿಗಳು ಕೂಡಲೇ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆ ಪಕ್ಕದಲ್ಲಿ ಈ ರೀತಿಯಾಗಿ ಅಂಗಡಿಗಳು ತಲೆ ಎತ್ತಿದರೆ ವಾಹನ ಸಂಚಾರಕ್ಕಾಗಿ ತೀವ್ರ ಅಡಚಣೆಯಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ನಾಡ ಕಚೇರಿಗೆ ಬರುವ ಸಾರ್ವಜನಿಕರೂ ಸೇರಿದಂತೆ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೂ ತೊಂದರೆಯಾಗಲಿದೆ ಎಂದು ದೂರಿದ್ದಾರೆ.

ಈ ಮೊದಲು ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ಅಂಗಡಿಗಳು ಹೆಚ್ಚಾಗಿದ್ದ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತು. ಈ ಕಾರಣದಿಂದಾಗಿ ಪುರಸಭೆ ಹಾಗೂ ಪೊಲೀಸ್ ಇಲಾಖೆಯವರು ಜೊತೆಗೂಡಿ ರಸ್ತೆ ಪಕ್ಕದಲ್ಲಿದ್ದ ಅಂಗಡಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ADVERTISEMENT

ಲಾಕ್‌ಡೌನ್ ಮುಗಿದು ಅನ್‌ಲಾಕ್ ಆದ ನಂತರ ಪುನಃ ಒಬ್ಬೊಬ್ಬರೇ ಅಂಗಡಿಗಳನ್ನು ತಂದು ಅನಧಿಕೃತವಾಗಿ ರಸ್ತೆಬದಿಗಳಲ್ಲಿ ಇಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಇಲ್ಲವಾದರೆ ನಾವು ಅಧಿಕಾರಿಗಳ ನಿರ್ಲಕ್ಷ್ಯ ಭಾವನೆಯ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿ ಸೋಮಶೇಖರ್ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.