ADVERTISEMENT

‘ಸದ್ಭಾವ ಮೂಡಿಸುವ ಶಿಬಿರ ಪ್ರೇರಕ’

ಭಾವೈಕ್ಯ ಮತ್ತು ಸದ್ಭಾವನಾ ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 13:01 IST
Last Updated 18 ಡಿಸೆಂಬರ್ 2018, 13:01 IST
ಅಮೃತಸರದ ಭಾವೈಕ್ಯ ಮತ್ತು ಸದ್ಭಾವನಾ ಶಿಬಿರದಲ್ಲಿ ಭಾಗವಹಿಸಿದ್ದ ವಿಜಯಪುರ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಗಣ್ಯರೊಂದಿಗೆ
ಅಮೃತಸರದ ಭಾವೈಕ್ಯ ಮತ್ತು ಸದ್ಭಾವನಾ ಶಿಬಿರದಲ್ಲಿ ಭಾಗವಹಿಸಿದ್ದ ವಿಜಯಪುರ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಗಣ್ಯರೊಂದಿಗೆ   

ವಿಜಯಪುರ: ‘ಯುವಜನರಲ್ಲಿ ಸದ್ಭಾವನೆ, ಶಾಂತಿ ಹೆಚ್ಚಿಸುವಂತಹ ಶಿಬಿರಗಳು ಯುವ ಜನರಿಗೆ ಪ್ರೇರಣೆಯಾಗಿವೆ‘ ಎಂದು ರಾಷ್ಟ್ರೀಯ ಯುವ ಯೋಜನೆಯ ಕರ್ನಾಟಕ ವಲಯದ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ್ ಹೇಳಿದರು.

ನವದೆಹಲಿಯ ರಾಷ್ಟ್ರೀಯ ಯುವ ಯೋಜನೆ ವತಿಯಿಂದ ‘ಗುರುನಾನಕ್ ಅವರ 550 ನೇ ಜನ್ಮ ದಿನಾಚರಣೆ’ ಅಂಗವಾಗಿ ಎಂಟು ದಿನಗಳು ಪಂಜಾಬ್‌ನಲ್ಲಿ ಅಂತರರಾಷ್ಟ್ರೀಯ ಭಾವೈಕ್ಯ ಮತ್ತು ಸದ್ಭಾವನಾ ಶಿಬಿರದಲ್ಲಿ ಭಾಗವಹಿಸಿದ್ದ ಯುವ ಸ್ವಯಂಸೇವಕರಿಗೆ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

’ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅಮೂಲ್ಯವಾದದ್ದು. ಗಾಂಧೀಜಿ ಹಾಗೂ ಗುರುನಾನಕ್ ಅಂತಹವರ ಸರಳ ತತ್ವ ಆಧಾರಿತ ಶಿಬಿರಗಳಿಂದ ಯುವಜನತೆಯಲ್ಲಿ ಸದ್ಭಾವನೆ ಹಾಗೂ ರಾಷ್ಟ್ರೀಯ ಭಾವೈಕ್ಯ ಮೂಡುತ್ತದೆ‘ ಎಂದರು.

ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಪ್ರದೀಪ್ ಮಾತನಾಡಿ, ’ವಿದ್ಯಾರ್ಥಿಯ ಜೀವನದಲ್ಲಿ ಸಿಗುವಂತಹ ಅವಕಾಶಗಳು ಮತ್ತೆಂದೂ ಸಿಗುವುದಿಲ್ಲ. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆಯ ಕಡೆಗೆ ಹೆಜ್ಜೆ ಹಾಕಬೇಕು‘ ಎಂದರು.

ADVERTISEMENT

ಪ್ರಗತಿ ಕಾಲೇಜಿನ 13 ಮಂದಿ, ಸ್ವಾಮಿ ವಿವೇಕಾನಂದ ಕೈಗಾರಿಕಾ ತರಬೇತಿ ಸಂಸ್ಥೆಯ ಇಬ್ಬರು ಯುವ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ಪ್ರಥಮ ಪಿ.ಯು.ಸಿ ವಿದ್ಯಾರ್ಥಿ ಪ್ರವೇಶ್ ಅಭಿನಯಿಸಿದ ‘ಭಾರತ್ ಕೀ ಸಂತಾನ್ ನೃತ್ಯ ರೂಪಕ’ ಕನ್ನಡ ಭಾಷಾ ಪರಿಚಯದ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೆ ಶಿಬಿರದಲ್ಲಿ ವಿಶೇಷ ಬಹುಮಾನ ಲಭಿಸಿದೆ ಎಂದು ಹೇಳಿದರು.

ಶಿಬಿರಾರ್ಥಿಗಳಾದ ಪ್ರವೇಶ್, ವಿವೇಕ್, ಚಂದನ್, ನರಸಿಂಹಮೂರ್ತಿ, ಎಂ.ಎಂ.ರಾಕೇಶ್, ಶ್ರೀಧರ್, ಪುನೀತ್ ಕುಮಾರ್ ಅವರು ಅನಿಸಿಕೆ ವ್ಯಕ್ತಪಡಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳು, ವಿವಿಧ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು, ರಾಷ್ಟ್ರೀಯಸ್ವಯಂಸೇವಕರು, ಭಾರತ ಸೇವಾದಳದ ಸ್ವಯಂಸೇವಕರು, ರಾಜ್ಯದ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು, ಯೂತ್ ರೆಡ್ ಕ್ರಾಸ್‌ನ ಸ್ವಯಂಸೇವಕರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಹರು ಯುವ ಕೇಂದ್ರದ ವಿವಿಧ ಯುವಕ - ಯುವತಿ ಮಂಡಳಿಗಳ ಪದಾಧಿಕಾರಿಗಳು ಸೇರಿ ರಾಜ್ಯದ 249 ಮಂದಿ ಯುವ ಜನತೆ ಶಿಬಿರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.