ADVERTISEMENT

‘ಎಳೆಯರಿಗೆ ಸಂಸ್ಕೃತಿಯ ಪರಿಚಯ ಮಾಡಿ’

ವಿಜಯಪುರದಲ್ಲಿ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 13:06 IST
Last Updated 4 ಸೆಪ್ಟೆಂಬರ್ 2019, 13:06 IST
ವಿಜಯಪುರದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಕಲೋತ್ಸವವನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಉದ್ಘಾಟಿಸಿದರು
ವಿಜಯಪುರದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಕಲೋತ್ಸವವನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಉದ್ಘಾಟಿಸಿದರು   

ವಿಜಯಪುರ: ‘ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಅಂಗವಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇಸಂಸ್ಕೃತಿ ಪರಿಚಯಿಸಿದರೆ ಸರ್ವತೋಮುಖ ಬೆಳವಣಿಗೆ ಸಾಧ್ಯ.ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆಗೆ ನಾಂದಿ ಹಾಡಿದ ಹಿಂದಿನ ಶಿಕ್ಷಣ ಸಚಿವ ಗೋವಿಂದೇಗೌಡ ಅವರನ್ನು ಸ್ಮರಿಸಬೇಕು’ ಎಂದು ಹೇಳಿದರು.

ADVERTISEMENT

ಉಪ ಪ್ರಾಂಶುಪಾಲ ಪಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಈ ಹಿಂದೆ ಶಿಕ್ಷಕರೆಂದರೆ ವಿದ್ಯಾರ್ಥಿಗಳಿಗೆ ಭಯವಿರುತ್ತಿತ್ತು. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಸ್ಪರ ಬೆರೆತು ಅನೇಕ ವಿಚಾರ ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಭಾಷಣ, ಕಂಠಪಾಠ, ಧಾರ್ಮಿಕ ಶ್ಲೋಕ (ಸಂಸ್ಕೃತ ಮತ್ತು ಅರೇಬಿಕ್) ಯೋಗಾಸನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜನಪದ ಹಾಡು, ಸುಗಮ ಸಂಗೀತ, ಭರತನಾಟ್ಯ, ಮಣ್ಣಿನ ಆಕೃತಿ ಮಾಡುವುದು, ಅಣಕು ನಟನೆ, ಪ್ರಬಂಧ ಬರೆಯುವುದು, ಚರ್ಚಾ ಸ್ಪರ್ಧೆ, ರಂಗೋಲಿ, ಗಝಲ್, ಫ್ಯಾನ್ಸಿ ಉಡುಗೆ, ಚಿತ್ರಕಲೆ, ಕಥೆ ಹೇಳುವುದು, ಜಾನಪದ ನೃತ್ಯ, ಕೋಲಾಟ, ರಸಪ್ರಶ್ನೆ ನಾಟಕ, ಕವಾಲಿ ಮತ್ತು ವಿಜ್ಞಾನ ಮಾದರಿ ತಯಾರಿಕೆ ಚಟುವಟಿಕೆಗಳನ್ನು ಮಕ್ಕಳು ಮಾಡಿದರು.

ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಭುಜೇಂದ್ರಪ್ಪ, ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಕಲ್ಯಾಣ್‌ ಕುಮಾರ್‌ ಬಾಬು, ರಿಯಾಜ್‌ ಪಾಷ, ಚಿಕ್ಕನಹಳ್ಳಿ ಸುಬ್ಬಣ್ಣ, ಜೆ.ಆರ್.ಮುನಿವೀರಣ್ಣ, ಮುನಿರಾಜು, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಕೆಂಚೇಗೌಡ, ಜೊನ್ನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೃಷಮೂರ್ತಿ, ಮಹಾತ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶ್ವಥ ನಾರಾಯಣ, ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಹಿರಿಯ ಶಿಕ್ಷಕರಾದ ಪಿ.ಎಂ.ಕೊಟ್ರೇಶ್, ಡಾ.ರಮೇಶಪ್ಪ, ರಾಮಾಂಜು, ಜೈಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.