ADVERTISEMENT

ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲಸ್ವಾಮಿ ದೇವಾಲಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 12:35 IST
Last Updated 17 ಡಿಸೆಂಬರ್ 2018, 12:35 IST
ಐತಿಹಾಸಿಕ ಶ್ರೀವೇಣುಗೋಪಾಲಸ್ವಾಮಿ ದೇವಾಲಯ.
ಐತಿಹಾಸಿಕ ಶ್ರೀವೇಣುಗೋಪಾಲಸ್ವಾಮಿ ದೇವಾಲಯ.   

ದೇವನಹಳ್ಳಿ: ಶತಮಾನದ ಇತಿಹಾಸ ಹೊಂದಿರುವ ದೇವನಹಳ್ಳಿ ನಗರದ ಕಲ್ಲಿನ ಕೋಟೆ ಒಳಾವರಣದಲ್ಲಿ ಭವ್ಯ ಪರಂಪರೆಯ ಕುರುಹು ಶ್ರೀ ವೇಣುಗೋಪಾಲಸ್ವಾಮಿ ದೇವಾಲಯವಿದೆ. ಆಮೆ ಆಕಾರದ ಬೃಹತ್ ಕೋಟೆಯ ಒಳಗಡೆ ದ್ರಾವಿಡ ಶೈಲಿಯಲ್ಲಿ ಇದನ್ನು ನಿರ್ಮಿಸಿದ್ದು ಮುಖಮಂಟಪ ಆರಂಭದಲ್ಲೇ ಮನ ಸೂರೆಗೊಳ್ಳುತ್ತದೆ.

ಕೇವಲ ನಾಲ್ಕು ಕಂಬಗಳ ಅಳವಡಿಕೆಗೆ ದೊರಕಿರುವ ಅವಕಾಶದಲ್ಲಿ ಶಿಲ್ಪಿಗಳು ಕಲಾವಂತಿಕೆಯನ್ನು ಸಾರ್ಥಕಗೊಳಿಸಿದ್ದಾರೆ. ನವರಂಗ ಮಂಟಪ ನಿರ್ಮಾಣದಲ್ಲಿ ಬಳಸಿರುವ ಕಂಬಗಳಲ್ಲಿ ಸೊಗಸಾದ ಉಬ್ಬು ಶಿಲ್ಪಗಳ ಚಿತ್ತಾರವಿದೆ. ಗರ್ಭಗುಡಿಯಲ್ಲಿ ಗೋಪಾಲ ವೇಣುಗಾನದ ನೃತ್ಯ ಭಂಗಿಯಲ್ಲಿ ರುಕ್ಮಿಣಿ, ಸತ್ಯಭಾಮೆ ಸಮೇತ ಭಕ್ತರಿಗೆ ದರ್ಶನ ನೀಡುತ್ತಿರುವುದು ವಿಶೇಷವಾದರೂ ವಿಜಯನಗರ ಕಾಲದ ಶೈಲಿಯಲ್ಲಿರುವ ಕೃಷ್ಣಶಿಲೆಯ ದೇವತಾ ಮೂಲ ವಿಗ್ರಹಗಳು ಒಮ್ಮೆಲೆ ಭಕ್ತಿ ಮತ್ತು ಶ್ರದ್ಧೆಯ ಭಾವನೆಯನ್ನು ಮೂಡಿಸುತ್ತವೆ.

ಪೂರ್ವಾಭಿಮುಖವಾಗಿರುವ ದೇವಾಲಯದ ಮಹಾದ್ವಾರದ ನೋಟ ಆಕರ್ಷಕವಾಗಿದೆ. ಸಿಮೆಂಟ್ ಇಟ್ಟಿಗೆಯಿಂದ ದುರಸ್ತಿಗೊಂಡಿರುವ ರಾಜಗೋಪುರ ಇಕ್ಕೆಲಗಳಲ್ಲಿ ಶ್ರೀನಿವಾಸನ ಕಲ್ಯಾಣೋತ್ಸವ ಮತ್ತು ವೈಕುಂಠದಲ್ಲಿ ಶೇಷಶಯನ ವಿಷ್ಣುವಿನ ಪ್ರತಿರೂಪ ಆಕರ್ಷಕ ಬಣ್ಣದ ಚಿತ್ತಾರದಿಂದ ಮನಸೂರೆಗೊಳ್ಳುತ್ತದೆ.

ADVERTISEMENT

ಹೊರಗೋಡೆ ಮೇಲೆ ಬಿಡಿಸಿರುವ ಶಿಲ್ಪ ಮಾಲಿಕೆಯೂ ಗಮನ ಸೆಳೆಯುತ್ತದೆ. 14ನೇ ಶತಮಾನದ ಅಂತ್ಯದಲ್ಲಿ ಕಂಚಿ ಬಳಿಯ ಯಣಮಂಜಿ ಪುತ್ತೂರಿನಿಂದ ವಲಸೆ ಬಂದ ರಣಭೈರೇಗೌಡ ಮತ್ತು ಆತನ ಸಹೋದರರು ತಾಲ್ಲೂಕಿನ ಆವತಿ ಬಳಿ ನಿಲ್ಲುತ್ತಾರೆ. 16ನೇ ಶತಮಾನದಲ್ಲಿ ದೇವನಹಳ್ಳಿ ಒಂದು ದೇವನದೊಡ್ಡಿಯಾಗಿ ಒಂದು ಚಿಕ್ಕ ಗ್ರಾಮವಾಗಿತ್ತು. ದೇವೇಗೌಡ ಗ್ರಾಮದ ಮುಖಂಡನಾಗಿದ್ದ. ರಣಭೈರೇಗೌಡನ ಮಗ ಮಲ್ಲಭೈರೇಗೌಡ ಈ ಗ್ರಾಮದ ಸುತ್ತ ಕೋಟೆ ನಿರ್ಮಿಸಿ ಕೋಟೆ ಒಳಭಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿ ದೇವೇಗೌಡನಿಗೆ ಧನ ಪರಿಹಾರ ನೀಡಿ ಅಭಿವೃದ್ಧಿ ಪಡಿಸಿದ. ಗ್ರಾಮಕ್ಕೆ ನಿಮ್ಮ ಹೆಸರನ್ನು ಇಟ್ಟು ಮುಂದುವರಿಸುವುದಾಗಿ ವಚನ ನೀಡಿದ್ದ ಎಂಬುದು ಲಭ್ಯವಿರುವ ಇತಿಹಾಸ.

ಈಗ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯದಲ್ಲಿ ವಾರ್ಷಿಕ ಮಾಘ ಮಾಸದಲ್ಲಿ ಬ್ರಹ್ಮ ರಥೋತ್ಸವ ಹಾಗೂ ಹಗಲು ಪರಿಷೆ ತಲಾಂತರದಿಂದ ನಡೆಯುತ್ತಿದೆ. ದ್ವಿಕಾಲ ಪೂಜೆ ಮತ್ತು ವಾರ್ಷಿಕ ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯುತ್ತಿರುತ್ತದೆ. ವಾರ್ಷಿಕ ವೈಕುಂಠ ಏಕಾದಶಿ ಕಾರ್ಯಕ್ರಮ ನಡೆಸುವ ಜವಾಬ್ದಾರಿ ಜ್ಯೋತಿನಗರ ವೈಶ್ಯರು (ಗಾಣಿಗ ಶೆಟ್ಟರು) ಸಮುದಾಯಕ್ಕೆ ತಲೆಮಾರುಗಳಿಂದ ನೀಡಲಾಗಿದೆ. ಹಿಂದೆ ತಾಲ್ಲೂಕು ದಂಡಾಧಿಕಾರಿ ಅನುಮತಿ ಮೇರೆಗೆ ಬೆಲೆ ಬಾಳುವ ಚಿನ್ನಾಭರಣಗಳನ್ನು ತಂದು ಮೂಲ ವಿಗ್ರಹಕ್ಕೆ ಮತ್ತು ಉತ್ಸವ ಮೂರ್ತಿಗೆ ಧಾರಣೆ ಮಾಡಿ ನವ ವಸ್ತ್ರ ವಿನ್ಯಾಸ ಮತ್ತು ಹೂವಿನಿಂದ ಅಲಂಕರಿಸಿ ದೇವಾಲಯದ ಒಳಭಾಗದಲ್ಲಿ ಪ್ರಕಾರೋತ್ಸವ ನಡೆಸಲಾಗುತ್ತಿತ್ತು. ಪ್ರಸ್ತುತ ಭದ್ರತೆ ದೃಷ್ಟಿಯಿಂದ ಆಭರಣ ನೀಡುತ್ತಿಲ್ಲ ಎನ್ನುತ್ತಾರೆ ವೈಕುಂಠ ಏಕಾದಶಿ ದ್ವಾರ ಮತ್ತು ಪೂಜಾ ಸಮಿತಿ ಸದಸ್ಯರು.

ವಿಮಾನ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಪುಷ್ಪಗಳಿಂದ ಅಲಂಕರಿಸಿ ಪೂಜೆ ನಡೆಸಿ ಮಂಗಳವಾದ್ಯಗಳಿಂದ ಮೆರವಣಿಗೆ ನಡೆಸಿ ಭಕ್ತರಿಗೆ ದರ್ಶನ ನೀಡುವುದು ಪ್ರತೀತಿ. ಸಂಜೆ ದೇವರಿಗೆ ಶ್ರೀವೆಂಕಟೇಶ್ವರ ಸ್ವಾಮಿ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ ಎನ್ನುತ್ತಾರೆ ಪೂಜಾ ಸಮಿತಿ ಗೌರವಾಧ್ಯಜಕ್ಷ ಜಿ.ಎನ್.ವೇಣುಗೋಪಾಲ್, ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಎಲೆ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಗೋಪಾಲ್, ಖಜಾಂಚಿ ದಾಸಪ್ಪ, ಸಹಕಾರ್ಯದರ್ಶಿ ಚಿಕ್ಕಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.