
ಕುಂಬಳಹಳ್ಳಿ(ಹೊಸಕೋಟೆ): ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ಅದ್ದೂರಿ 21 ವರ್ಷದ ಕನಕದಾಸ ಜಯಂತಿ ನಡೆಯಿತು.
ಜಯಂತಿ ಅಂಗವಾಗಿ ಬೀದಿಗಳಲ್ಲಿ ಡೊಳ್ಳುಕುಣಿತ, ವೀರಗಾಸೆ, ಕಾಲಾಟ, ಪ್ರದರ್ಶನ ನೋಡುಗರ ಮನ ಸೆಳೆಯಿತು. ಜೊತೆಗೆ ಕನಕದಾಸರ ಕಂಚಿನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಕುರುಬರಹಳ್ಳಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಕುರುಬ ಸಮುದಾಯದ ಕುಟುಂಬಗಳಿವೆ. ರಾಜಕೀಯವಾಗಿ ಎಷ್ಟೇ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಕನಕದಾಸ ಜಯಂತಿ ಎಂದಾಗ ಒಂದೇ ತಾಯಿಯ ಮಕ್ಕಳಂತೆ ಒಟ್ಟಾಗುತ್ತಾರೆ. ಇದೇ ರೀತಿ ಸಮುದಾಯದ ಏಳಿಗೆಯ ಸಂದರ್ಭದಲ್ಲೂ ಒಮ್ಮತದ ಪ್ರದರ್ಶನ ಆಗಬೇಕಿದೆ ಎಂದು ಹೇಳಿದರು.
ಮಹಾನ್ ಸಾಧಕರ ಜಯಂತಿ ಆಚರಣೆಯಲ್ಲಿ ಜಾತಿ ಎಂದಿಗೂ ಮುನ್ನೆಲೆಗೆ ಬರಬಾರದು. ಅವರ ಅದರ್ಶಗಳು, ಮೌಲ್ಯಗಳು ಮಾತ್ರವೇ ನಮಗೆ ಮುಖ್ಯ ಆಗಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಅದ್ದೂರಿಯಿಂದ ಜಯಂತಿ ಆಚರಿಸುವುದು ಮುಖ್ಯ ಅಲ್ಲ. ಜಯಂತಿಯ ಉದ್ದೇಶವನ್ನು ಯುವ ಪೀಳಿಗೆಗೆ ತಿಳಿಸಬೇಕು. ಮಹಾನೀಯರ ಅದರ್ಶಗಳನ್ನು ಅರ್ಥಮಾಡಿಸಬೇಕು ಎಂದು ಹೇಳಿದರು.
ಗ್ರಾಮಸ್ಥ ಚನ್ನಬೀರಪ್ಪ, ಕೆವಿ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಆಂಜಿನಪ್ಪ, ಚಿಕ್ಕಮುನಿಶಾಮೆಗೌಡ, ಮಾಜಿ ಗ್ರಾ.ಪಂ ಉಪಾಧ್ಯಕ್ಷ ಹರೀಶ್, ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.