ADVERTISEMENT

ಕಾರ್ಮಿಕರ ಕೊರತೆ: ರೇಷ್ಮೆ ಉದ್ಯಮಕ್ಕೆ ಪೆಟ್ಟು

ಉತ್ಪಾದನಾ ವೆಚ್ಚ ಹೆಚ್ಚಳ; ಆದಾಯ ಕುಸಿತ l ಗೂಡಿಗೆ ನಿರ್ದಿಷ್ಟ ಬೆಲೆ ನಿಗದಿಗೆ ನಿರ್ಲಕ್ಷ್ಯ l ಬೆಳೆಗಾರರ ಹಿತ ಮರೆತ ಸರ್ಕಾರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 4:58 IST
Last Updated 18 ಜುಲೈ 2022, 4:58 IST
ಹಣ್ಣಾಗುವ ಹಂತದಲ್ಲಿರುವ ರೇಷ್ಮೆ ಹುಳು
ಹಣ್ಣಾಗುವ ಹಂತದಲ್ಲಿರುವ ರೇಷ್ಮೆ ಹುಳು   

ವಿಜಯಪುರ:ಬಯಲುಸೀಮೆ ಜನರು ನೀರಾವರಿ ಸೌಲಭ್ಯವಿದ್ದಾಗ ಕೃಷಿ, ತೋಟಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲು, ಹಣ್ಣು, ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದರು. ಆದರೆ, ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ 1,500 ಅಡಿಗೆ ಕುಸಿಯುತ್ತಿದ್ದಂತೆ ಬಹುತೇಕ ರೈತರು, ಕೃಷಿ, ತೋಟಗಾರಿಕಾ ಬೆಳೆಗಳನ್ನು ಕೈಬಿಟ್ಟು ರೇಷ್ಮೆ ಉದ್ಯಮದತ್ತ ಮುಖ ಮಾಡಿದ್ದಾರೆ.

ರೇಷ್ಮೆ ಉದ್ಯಮವು ನಂಬಿದ್ದ ರೈತರನ್ನು ಕೈಬಿಟ್ಟಿಲ್ಲ. ಗ್ರಾಮೀಣ ಭಾಗದ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಜೊತೆಗೆ ಆರ್ಥಿಕ ಸ್ವಾವಲಂಬನೆಯನ್ನೂ ನೀಡಿದೆ. ಲಕ್ಷಾಂತರ ಮಂದಿಗೆ ಜೀವನ ನೀಡಿದ್ದ ಈ ಉದ್ಯಮವು ಇದೀಗ ಕಾರ್ಮಿಕರ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಉದ್ಯಮದ ಉಳಿವಿಗಾಗಿ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಯುವಪೀಳಿಗೆಗೆ ಈ ಉದ್ಯಮ ಕುರಿತು ಅಗತ್ಯ ತರಬೇತಿ ನೀಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಉದ್ಯಮವು ಮೊಟ್ಟೆಯಿಂದ ಹಿಡಿದು ಬಟ್ಟೆ ತಯಾರಿಕೆವರೆಗೂ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಈ ಮೂಲಕ ಜನರ ಜೀವನಮಟ್ಟದ ಸುಧಾರಣೆಗೆ ಬೆನ್ನೆಲುಬಾಗಿದೆ. ಇತ್ತೀಚೆಗೆ ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಹಲವು ಸವಾಲು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡಿ ಉದ್ಯಮ ಉಳಿಸಿದರೆ ಮಾತ್ರ ಈ ಉದ್ಯಮದ ಮೂಲಕ ಮುಂದಿನ ಪೀಳಿಗೆ ತಮ್ಮ ಜೀವನ ನಿರ್ವಹಿಸಲು ಸಾಧ್ಯವಾಗಲಿದೆ.

ADVERTISEMENT

ಪಾಲಿಸ್ಟರ್‌ನಿಂದ ಉದ್ಯಮಕ್ಕೆ ಹೊಡೆತ: ಬಟ್ಟೆ ತಯಾರಿಕೆಯಲ್ಲಿ ಶೇ 90ರಷ್ಟು ಪಾಲು ಪಾಲಿಸ್ಟರ್ ಬಟ್ಟೆಯದ್ದಾಗಿದೆ. ಉಳಿದ ಶೇ 10ರಷ್ಟು ಬಟ್ಟೆಗಳಿಗೆ ಮಾತ್ರವೇ ರೇಷ್ಮೆ ಬಳಕೆ ಮಾಡಲಾಗುತ್ತಿದೆ. ಇದರಿಂದ ಇಡೀ ಉದ್ಯಮಕ್ಕೆ ಪೆಟ್ಟು ಬಿದ್ದಿದೆ ಎಂದು ಈ ಉದ್ಯಮದಲ್ಲಿ ತೊಡಗಿಕೊಂಡಿರುವ ರೈತರು ಹೇಳುತ್ತಾರೆ.

ಸರ್ಕಾರ ಕೇವಲ ಗೂಡು ಉತ್ಪಾದನೆಯನ್ನಷ್ಟೇ ಗಮನದಲ್ಲಿಟ್ಟುಕೊಳ್ಳುತ್ತದೆ. ರೈತರು ಮೊದಲೇ ಹಾಕಿರುವ ದೀರ್ಘಾವಧಿ ಬಂಡವಾಳದ ಕಡೆಗೆ ಗಮನಹರಿಸುತ್ತಿಲ್ಲ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಆದಾಯ ಕಡಿಮೆಯಾಗುತ್ತಿದೆ. ಬೆಲೆ ಏರಿಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಉದ್ಯಮಕ್ಕೆ ಕಾರ್ಮಿಕರ ಅಭಾವ:ಈಗ ಉದ್ಯಮವು ಕಾರ್ಮಿಕರ ಕೊರತೆ ಎದುರಿಸುತ್ತಿದ್ದು, ಈಗಿರುವ ಕಾರ್ಮಿಕರು ಉದ್ಯಮದಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೆಮುಂದೇನು ಎನ್ನುವ ಆತಂಕ ಕಾಡಲಾರಂಭಿಸಿದೆ. ರೇಷ್ಮೆ ಮೊಟ್ಟೆ ಬಿತ್ತನೆ ಕೇಂದ್ರಗಳಲ್ಲಿ ಅನುಭವದ ಕಾರ್ಮಿಕರ ಕೊರತೆಯಿದೆ.

ರೇಷ್ಮೆ ಹುಳು ಸಾಕಾಣಿಕೆ, ನೂಲು ಬಿಚ್ಚಾಣಿಕೆ, ಟ್ವಿಸ್ಟಿಂಗ್, ಬಟ್ಟೆ ತಯಾರಿಕೆ ಸೇರಿದಂತೆ ಹಲವು ಹಂತದಲ್ಲಿ ನುರಿತ ಕಾರ್ಮಿಕರ ಕೊರತೆ ಇದೆ. ಪ್ರಸ್ತುತ ಈ ಉದ್ಯಮದಲ್ಲಿ ತೊಡಗಿಸಿಕೊಂಡ ಕುಟುಂಬಗಳು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಕಾರಣಕ್ಕೆ ಬೇರೆ ಊರುಗಳಿಗೆ ಕಳುಹಿಸಿದ್ದಾರೆ. ಹಿರಿಯರು ಮಾತ್ರವೇ ಈ ಉದ್ಯಮದಲ್ಲಿ ತೊಡಗಿದ್ದಾರೆ. ಹಾಗಾಗಿ, ಅವರ ಮಕ್ಕಳಿಗೆ ಈ ಉದ್ಯಮದ ಪರಿಚಯ ಇಲ್ಲದಂತಾಗಿದೆ. ರೈತರಿಗೂ ಕೂಡಾ ದೀರ್ಘಾವಧಿ ಬಂಡವಾಳ ಹಾಗೂ ಅಲ್ಪಾವಧಿ ಬಂಡವಾಳ ಎರಡನ್ನೂ ತಾಳೆ ಮಾಡಿಕೊಂಡು ಪ್ರತಿ ಕೆ.ಜಿ.ಗೂಡಿಗೆ ಸೂಕ್ತ ಬೆಲೆ ನಿಗದಿ ಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.