ವಿಜಯಪುರ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ವಿಜಯಪುರ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.
ಪಟ್ಟಣದಿಂದ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆರೆಯ ಜಿಲ್ಲೆಗಳಾದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ತುಮಕೂರು, ತಿರುಪತಿ ಹೀಗೆ... ಅನೇಕ ಕಡೆಗಳಿಗೆ ಈ ನಿಲ್ದಾಣದ ಮೂಲಕವೇ ಬಸ್ ಸಂಚರಿಸುತ್ತವೆ.
ಈ ಬಸ್ ನಿಲ್ದಾಣದಿಂದಲೇ ದಿನನಿತ್ಯ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರು ಬಸ್ ಸಂಚಾರವನ್ನು ಅವಲಂಬಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರ್ಕಾರ `ಶಕ್ತಿ' ಯೋಜನೆಯಡಿ ನೀಡಿರುವ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೊರತೆ ಪ್ರಯಾಣಿಕರಿಗೆ ಕಾಡುತ್ತಿದೆ.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿದೆ. ಎಲ್ಲೆಂದರಲ್ಲಿ ಗುಟ್ಕಾ, ಎಲೆಅಡಿಕೆ ಅಗೆದು ಉಗಿದಿರುವ, ಕಸದ ರಾಶಿಯಿಂದ ಅಸಹ್ಯಕರ ವಾತಾವರಣ ಇದೆ. ಮುರಿದ ಕುರ್ಚಿಗಳು, ಎಲ್ಲೆಂದರಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳು ಬಸ್ ನಿಲ್ದಾಣದ ಅಂದವನ್ನು ಹದಗೆಡಿಸಿದೆ.
ಕುಡಿಯುವ ನೀರು, ಶೌಚಾಲಯದ ನಿರ್ವಹಣೆ ಕೊರತೆ ಕಾಡುತ್ತಿದೆ. ನಿಲ್ದಾಣದ ನೆಲಹಾಸಿಗೆ ಕಿತ್ತಿರುವುದು ಪ್ರಯಾಣಿಕರ ಓಡಾಟಕ್ಕೂ ತೊಂದರೆಯಾಗಿದೆ. ರಾತ್ರಿ ವೇಳೆ ಕುಡುಕರ ತಾಣವಾಗಿ ಬಸ್ ನಿಲ್ದಾಣ ಮಾರ್ಪಡುತ್ತಿದೆ.
ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಪ್ರಯಾಣಿಕರು ಗಂಟೆ ಗಂಟಲೇ ಬಸ್ಸಿಗಾಗಿ ನಿಂತುಕೊಂಡೇ ಕಾಯಬೇಕಿದೆ. ಇಲ್ಲಿಯೇ ರಸ್ತೆ ವಿಸ್ತರಣೆ ಕಾಮಗಾರಿ ಆರಂಭದಿಂದ ಧೂಳು ಹೆಚ್ಚಾಗಿ ಅಂಗಡಿ ಮಳಿಗೆಗಳಿಗೆ, ಪ್ರಯಾಣಿಕರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದೆ.
ಸಾರಿಗೆ ಬಸ್‍ಗಳು ಹಾಗೂ ಖಾಸಗಿ ಬಸ್ ಒಂದೇ ನಿಲ್ದಾಣಕ್ಕೆ ಬಂದು ಸೇರುವುದರಿಂದ ಚಾಲಕರ ನಡುವೆ ಪೈಪೋಟಿ ಏರ್ಪಟ್ಟಿದೆ. ಎಲ್ಲೆಂದರಲ್ಲಿ ಬೈಕ್, ಕಾರುಗಳನ್ನು, ತಳ್ಳುಗಾಡಿಗಳನ್ನು ನಿಲ್ಲಿಸುವುದರಿಂದ ಬಸ್‍ಗಳ ಸಂಚಾರಕ್ಕೆ, ಪ್ರಯಾಣಿಕರಿಗೆ ಅಡಚಣೆಯಾಗಿದೆ.
ವಿಜಯಪುರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ಮೂಲ ಸೌಕರ್ಯ ಒದಗಿಸಲು ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಂಡು ಪ್ರಯಾಣಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.
ವಿಜಯಪುರ ಬಸ್ ನಿಲ್ದಾಣದಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸಬೇಕುಮಾಣಿಕ್ಯ ವಿದ್ಯಾರ್ಥಿ
ವಿಜಯಪುರದಿಂದ ಬಸ್ ನಿಲ್ದಾಣದಿಂದ ಬೆಂಗಳೂರು ಶಿಡ್ಲಘಟ್ಟ ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಕಡೆಗಳಿಗೆ ಹೋಗಲು ಬಸ್ಸಿಗಾಗಿ ಪ್ರಯಾಣಿಕರು ನಿಂತುಕೊಂಡೇ ಕಾಯಬೇಕಿದೆ. ಇದರಿಂದ ಮಕ್ಕಳು ವೃದ್ಧರು ಮಹಿಳೆಯರಿಗೆ ತೊಂದರೆ ಹೆಚ್ಚಾಗಿದೆಇಮ್ರಾನ್ ಸ್ಥಳೀಯ ನಿವಾಸಿ
ಕಳ್ಳರ ಕಾಟ
ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುವ ಪ್ರಯಾಣಿಕರಿಗೆ ರಕ್ಷಣೆ ಇಲ್ಲ. ಬಸ್ ಹತ್ತುವ ವೇಳೆ ಜನಸಂದಣಿ ಉಂಟಾದಾಗ ಮೊಬೈಲ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ. ಜೇಬುಗಳ್ಳರ ಹಾವಳಿ ಹೆಚ್ಚಾಗಿದ್ದರೂ ಪೊಲೀಸ್ ಸಿಬ್ಬಂದಿ ಕಾಣಸಿಗುವುದಿಲ್ಲ. ಜನಸಂದಣಿ ಇರುವ ಕಡೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಹೆಸರಿಲ್ಲದ ಬಸ್ ನಿಲ್ದಾಣ
ಪುರಸಭೆ ವ್ಯಾಪ್ತಿಗೆ ಬರುವ ಬಸ್ ನಿಲ್ದಾಣಕ್ಕೆ ನಾಮವೇ ಇಲ್ಲ. ಹೊಸ ಪ್ರಯಾಣಿಕರಿಗೆ ಬಸ್ ನಿಲ್ದಾಣದಿಂದ ಬಸ್‌ಗಳು ಎಲ್ಲಿಂದ ಎಲ್ಲಿಗೆ ಯಾವ ಸಮಯಕ್ಕೆ ತೆರಳುತ್ತವೆ ಎಂಬ ಮಾಹಿತಿಯೂ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಬಸ್ ನಿಲ್ದಾಣದಲ್ಲಿ ಬಸ್ ಮಾರ್ಗ ಸಂಚಾರದ ನಾಮಫಲಕ ಅಳವಡಿಸಬೇಕು. ಬಸ್ ನಿಲ್ದಾಣಕ್ಕೆ ಹೆಸರು ಬರೆಸಬೇಕೆಂದು ಪ್ರಯಾಣಿಕರು ಅಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.