ಮಾಲೂರು: ಕುಡಿಯುವ ನೀರು, ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ನಾಗರಿಕ ಸಮಾಜದ ವಾಸಕ್ಕೆ ಬೇಕಾದ ಮೂಲ ಸೌಕರ್ಯ ಇಲ್ಲದೆ ಪಾರ್‍ತಿಬನ್ ಬಡಾವಣೆ ಜನ ಪರಾಡುತ್ತಿದ್ದಾರೆ.
ಪಟ್ಟಣದ 22–23ನೇ ವಾರ್ಡ್‌ನ ಸುಮಾರು 60 ರಿಂದ 70 ಮನೆ ಹೊಂದಿರುವ ಪಾರ್‍ತಿಬನ್ ಬಡವಾಣೆಯಲ್ಲಿ ಸ್ವಚ್ಛತೆ ಇಲ್ಲದೆ ಮನೆಗಳ ಬಳಿ ಗಿಡಗೆಂಟೆಗಳು ಅಳೆತ್ತರ ಬೆಳೆದು ಹಾವುಗಳ ಕಾಟದಿಂದ ಇಲ್ಲಿನ ನಿವಾಸಿಗಳು ಭಯದಿಂದ ಜೀವನ ಸಾಗಿಸುತ್ತಿದ್ದಾರೆ.
10ರಿಂದ 15 ವರ್ಷಗಳಿಂದ ವಾಸ ಮಾಡುತ್ತಿರುವ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸೌಕರ್ಯ ಇಲ್ಲದೇ ನೀರಿನ ಟ್ಯಾಂಕ್ ಮೇಲೆ ಅವಲಂಭಿತರಾಗಿದ್ದಾರೆ. ಒಂದು ಟ್ಯಾಂಕರ್ ₹400ರಿಂದ 500 ಕೊಟ್ಟು ಖರೀದಿ ಮಾಡಬೇಕಾಗಿದೆ.
ಚರಂಡಿ ವ್ಯವಸ್ಥೆ ಇಲ್ಲದೇ ಬಡಾವಣೆಯಲ್ಲಿ ಮನೆಗಳಿಂದ ಬರುವ ಕೊಳಚೆ ನೀರನ್ನು ಮನೆಯ ಪಕ್ಕದ ಖಾಲಿ ನೀವೇಶನಗಳಿಗೆ ಹರಿಸಲಾಗುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ.
ಬಡಾವಣೆಯಲ್ಲಿ ಸಮರ್ಪಕ ರಸ್ತೆ ಇಲ್ಲದೆ ಓಡಾಡುವುದೇ ದೊಡ್ಡ ಸವಾಲಾಗಿದೆ. ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನರಕ ದರ್ಶನ. ದ್ವಿಚಕ್ರ ವಾಹನ ಸವಾರರು ಮಳೆಗಾಲದಲ್ಲಿ ಕೆಸರಲ್ಲಿ ಬೀಳುವುದು ಸಹಜವಾಗಿದೆ.
ಬೀದಿದೀಪ ಇಲ್ಲದ ಕಾರಣ ಕತ್ತಲಾಗುತ್ತಿದ್ದಂತೆ ಜನ ಮನೆಯಿಂದ ಹೊರಬರಲು ಹೆದರುತ್ತಾರೆ. ಜತೆಗೆ ಬಡಾವಣೆ ಕಗ್ಗತ್ತಲು ಕವಿದಿರುವುದರಿಂದ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಮನೆಗಳ ಅಂಗಳದಲ್ಲಿ ನಿಲ್ಲಿಸುವ ಸುಮಾರು ದ್ವಿಚಕ್ರ ವಾಹನಗಳು ಕಳ್ಳರ ಪಾಲಾಗಿದೆ.
ಇತ್ತಿಚೆಗೆ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ಸುಮಾರು ₹2ಲಕ್ಷದ ಎರಡು ಜಾನುವಾರುಗಳು ಕಳ್ಳತನ ಮಾಡಲಾಗಿದೆ. ಈ ಸಂಬಂಧ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಹಸು ಕಳೆದುಕೊಂಡ ರಾಮಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.