ADVERTISEMENT

ದೊಡ್ಡಬಳ್ಳಾಪುರ: ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ; ಹಣ್ಣು ದವನ ಅರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 5:13 IST
Last Updated 26 ಮಾರ್ಚ್ 2024, 5:13 IST
ದೊಡ್ಡಬಳ್ಳಾಪುರದ ಅರ್ಕಾವತಿ ಬಡಾವಣೆಯಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು
ದೊಡ್ಡಬಳ್ಳಾಪುರದ ಅರ್ಕಾವತಿ ಬಡಾವಣೆಯಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು   

ದೊಡ್ಡಬಳ್ಳಾಪುರ: ನಗರದ ಅರ್ಕಾವತಿ ಬಡಾವಣೆಯಲ್ಲಿ ಸೋಮವಾರ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ ಸಂಭ್ರಮದಿಂದ ನೆರವೇರಿತು.

ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನ ಭಕ್ತಾದಿಗಳು ರಥಕ್ಕೆ ಹಣ್ಣು ದವನ ಸಮರ್ಪಿಸಿ ಸ್ವಾಮಿಯ ದರ್ಶನ ಪಡೆದರು. ರಥೋತ್ಸವದಲ್ಲಿ ತಮಟೆ, ಮಂಗಳ ವಾದ್ಯದೊಂದಿಗೆ ವೀರಗಾಸೆ ಕುಣಿತ ಕಲಾತಂಡಗಳು ಭಾಗವಹಿಸಿದ್ದವು.

ರಥೋತ್ಸವದ ಅಂಗವಾಗಿ ತಿರುಕಲ್ಯಾಣೋತ್ಸವ, ಪೂರ್ಣಾಹುತಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಮೊದಲಾದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ADVERTISEMENT

ಕದರಿ ಪೌರ್ಣಮಿ ಪ್ರಯುಕ್ತ ನಗರದ ವಡ್ಡರ ಪೇಟೆಯ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಅಭಿಷೇಕ ಹಾಗೂ ವಿಶೇಷ ಅಲಂಕಾರ, ಸಾಮೂಹಿಕ ಸತ್ಯನಾರಾಯಣ ಪೂಜೆಗಳು ನಡೆದವು.

ತೂಬಗೆರೆಯಲ್ಲಿ ಸಂಭ್ರಮದ ರಥೋತ್ಸವ: ತಾಲ್ಲೂಕಿನ ತೂಬಗೆರೆ ಸೋಮವಾರ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ನಡೆದ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ನೂರಾರು ಭಕ್ತರು ಸಾಕ್ಷಿಯಾದರು. ಭಕ್ತರು ರಥಕ್ಕೆ ರಥಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವಕ್ಕೂ ಮುನ್ನ ರಥವನ್ನು ಹೂವಿನಿಂದ ಅಲಂಕಾರ ಮಾಡಿ ರಥಾಂಗ ಹೋಮ, ರಥಾಂಗ ಪ್ರತಿಷ್ಠೆ ಗಣಪತಿ ಹೋಮ ನಡೆಸಲಾಗಿತ್ತು. ರಥೋತ್ಸವ ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಧಾರ್ಮಿಕ ದತ್ತಿ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ರಥೋತ್ಸವ ನಡೆಯಿತು.

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಸೋಮವಾರ ನಡೆದ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.