ADVERTISEMENT

ಕೆಐಎಡಿಬಿ ಪರ ಹೇಳಿಕೆಗೆ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:41 IST
Last Updated 11 ಜುಲೈ 2025, 18:41 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನ ವಿರೋಧಿ ಗ್ರಾಮ ಆಂದೋಲನ ಸಭೆ ನಡೆಯಿತು
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನ ವಿರೋಧಿ ಗ್ರಾಮ ಆಂದೋಲನ ಸಭೆ ನಡೆಯಿತು   

ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಕೃಷಿ ಭೂಮಿ ಸ್ವಾಧೀನದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿರುವ ಬೆನ್ನಲೇ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣಪ್ಪ ಅವರ ಗುಂಪು ನಾವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪರವಿದ್ದೇವೆ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ತೆಲ್ಲೋಹಳ್ಳಿ, ಹರಳೂರುನಲ್ಲಿ ಭೂ ಸ್ವಾಧೀನ ವಿರೋಧಿ ಗ್ರಾಮ ಆಂದೋಲನ ನಡೆಯಿತು.

ತೆಲ್ಲೋಹಳ್ಳಿಯಲ್ಲಿ ನಡೆದ ಭೂ ಸ್ವಾಧೀನ ವಿರೋಧಿ ಗ್ರಾಮ ಆಂದೋಲನ ಸಭೆಯಲ್ಲಿ ಜೆಡಿಎಸ್‌ ಎಸ್‌.ಸಿ ಘಟಕದ ಅಧ್ಯಕ್ಷ ಎಂ.ಎಂ.ಶ್ರೀನಿವಾಸ್‌ ಮಾತನಾಡಿ, ‘ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ಪಕ್ಷಾತೀತವಾಗಿ ಪ್ರತಿಯೊಬ್ಬರು ಬೆಂಬಲ ವ್ಯಕ್ತಪಡಿಸಿದ್ದಾರೆ. ವಯಕ್ತಿಕ ಹಿತಾಸಕ್ತಿಗೆ ಹಣ ಮಾಡಲು, ರಿಯಲ್ ಎಸ್ಟೇಟ್‌ ಉದ್ಯಮ ಮಾಡುವವರ ಹೇಳಿಕೆ ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮೀಸಲಾತಿ ಕ್ಷೇತ್ರದಲ್ಲಿ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಆಪ್ತ ಬಳಗದಲ್ಲಿ ಕಾಣಿಸಿಕೊಳ್ಳುವ ಜಿಪಂ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣಪ್ಪ ಅವರಿಗೆ 1,200 ದಿನಗಳಿಂದ ಧ್ವನಿ ಇರಲಿಲ್ಲ. ಮಾತು ಬರುತ್ತಿರಲಿಲ್ಲವೇನೋ? ಇದೀಗಾ ಏಕಾಏಕಿ ಮೇಲೆದ್ದು ಬಂದು ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಚನ್ನರಾಯಪಟ್ಟಣ ಜನರ ಆಶೀರ್ವಾದದಿಂದ ಜಿಲ್ಲಾ ಪಂಚಾಯಿತಿ ಚುನಾಯಿತ ಪ್ರತಿನಿಧಿಯಾಗಿದ್ದ ಇವರು, ಮತದಾರರಿಗೆ ದ್ರೋಹ ಮಾಡುವ ಕೃತ್ಯಕ್ಕೆ ಮುಂದಾಗಿದ್ದಾರೆ. ಗೋಮಾಳದಲ್ಲಿರುವ ಇವರ ಜಮೀನುಗಳಿಗೆ ಕೆಐಎಡಿಬಿಯಿಂದ ಪರಿಹಾರ ಪಡೆಯಲು ಹುನ್ನಾರ ನಡೆಸಿದಂತಿದೆ’ ಎಂದು ಆರೋಪಿಸಿದರು.

‘ಭೂದಾಯಿಗಳು, ಭೂಗಳ್ಳರು, ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರ ಗುಂಪು ಕಟ್ಟಿಕೊಂಡು ಹೋಗಿ ಬೆಂಗಳೂರಿನಲ್ಲಿ ಮಾತನಾಡುವ ಇವರು ಕಳೆದ 1,200 ದಿನಗಳಿಂದ ಮೌನವಾಗಿದ್ದು ಏಕೆ?, ಕಾಂಗ್ರೆಸ್‌ ಸರ್ಕಾರದ ಪ್ರಯೋಜಿತ ವ್ಯಕ್ತಿಗಳಂತೆ ಮಾತನಾಡುವವರಿಗೆ ಜನರೇ ಬುದ್ಧಿ ಕಲಿಸುತ್ತಾರೆ’ ಎಂದು ಟೀಕಿಸಿದರು.

‘ಇಂತಹ ರಾಜಕೀಯ ಮುಖಂಡರಿಂದ ಈಗಾಗಲೇ ಸಾಕಷ್ಟು ದಲಿತರು ಭೂ ರಹಿತರಾಗಿದ್ದಾರೆ. ಸರ್ಕಾರದ ಪ್ರಯೋಜಿತ ಹೇಳಿಕೆಗಳನ್ನು ಮಾತನಾಡುವವರಿಗೆ, ರೈತರ ನೋವು, ಅನ್ನದಾತನ ಸಂಕಷ್ಟ ಅರಿವಿಗೆ ಬರುವುದಿಲ್ಲ. ಇಂತಹ ಅಯೋಗ್ಯರನ್ನು ಚುನಾವಣೆಯಲ್ಲಿ ಸೋಲಿಸಿ ದೂರವಿಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.