ADVERTISEMENT

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು: ತಹಶೀಲ್ದಾರ್‌ ನಡೆಗೆ ಜನರ ಬೇಸರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 4:19 IST
Last Updated 3 ಜೂನ್ 2021, 4:19 IST
ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿಗೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮಂಜೂರು ಮಾಡಿರುವ ಜಮೀನು
ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿಗೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮಂಜೂರು ಮಾಡಿರುವ ಜಮೀನು   

ವಿಜಯಪುರ:ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ಸರ್ವೆ ನಂಬರ್ 69ರಲ್ಲಿ ಮಂಜೂರು ಮಾಡಿರುವ ಭೂಮಿ ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಕಂದಾಯ ಇಲಾಖೆ ಅಧಿಕಾರಿಗಳು ಇದೇ ಸರ್ವೆ ನಂಬರ್‌ನಲ್ಲಿ ಇರುವ ಬೇರೆ ಭೂಮಿಯನ್ನು ಮಂಜೂರು ಮಾಡಬೇಕು. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಗಮನಕ್ಕೆ ತರಲಾಗುವುದು ಎಂದು ಮುಖಂಡ ಭೈರೇಗೌಡ ತಿಳಿಸಿದರು.

ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರಮಂಗಲ ರಸ್ತೆಯಲ್ಲಿರುವ ಸರ್ವೆ ನಂಬರ್ 69ರಲ್ಲಿ 20 ಗುಂಟೆ ಭೂಮಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯ ವಿಲೇವಾರಿ ಮಾಡುವ ಘಟಕ ಸ್ಥಾಪನೆಗಾಗಿ ಮಂಜೂರು ಮಾಡಲಾಗಿದೆ. ಭೂಮಾಪಕರು ಬಂದು ಅದನ್ನು ಅಳತೆ ಮಾಡಿಕೊಂಡು ಹೋಗಿದ್ದಾರೆ. ಈಗ ಮಂಜೂರು ಮಾಡಿರುವ ಭೂಮಿಯಲ್ಲಿ ಸುಮಾರು 30 ಅಡಿಗೂ ಹೆಚ್ಚು ಹಳ್ಳಗಳಿವೆ. ಗ್ರಾಮ ಪಂಚಾಯಿತಿ ಮೂಲಕ ಈ ಹಳ್ಳವನ್ನು ಮುಚ್ಚಬೇಕಾದರೆ ಸುಮಾರು ₹ 10 ಲಕ್ಷ ಬೇಕಾಗುತ್ತದೆ ಎಂದು ಹೇಳಿದರು.

ಪಂಚಾಯಿತಿಯಲ್ಲಿ ಇಷ್ಟೊಂದು ಹಣದ ಲಭ್ಯತೆ ಇಲ್ಲ. ಯೋಗ್ಯವಾದ ಭೂಮಿಯ ಮಂಜೂರು ಮಾಡುವ ಬದಲಿಗೆ ಕೆಲವರ ಒತ್ತಡಗಳಿಗೆ ಮಣಿದು ಅನನುಕೂಲವಾಗಿರುವ ಭೂಮಿಯನ್ನು ಮಂಜೂರು ಮಾಡಿರುವುದು ವಿಪರ್ಯಾಸ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯಾ ಮಾತನಾಡಿ, ‘ಘನತ್ಯಾಜ್ಯ ವಿಲೇವಾರಿ ಘಟಕ ಮಾಡಲಿಕ್ಕಾಗಿ ನೀಡಿರುವ ಜಾಗದಲ್ಲಿ ನಾವು ಘಟಕ ಸ್ಥಾಪನೆ ಮಾಡಬೇಕಾದರೆ ಸಾಕಷ್ಟು ಅನುದಾನ ಬೇಕಾಗುತ್ತದೆ. ಈ ಕುರಿತು ತಹಶೀಲ್ದಾರ್ ಅವರಿಗೆ ಪತ್ರ ಬರೆದು ಬೇರೆ ಸ್ಥಳ ಗುರುತಿಸಿ ಕೊಡುವಂತೆ ಮನವಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.