ADVERTISEMENT

ಸುಳ್ಳೇ ಬಿಜೆಪಿ ಮನೆ ದೇವರು: ಶಾಸಕ ಬೈರತಿ ಸುರೇಶ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:40 IST
Last Updated 1 ಡಿಸೆಂಬರ್ 2019, 13:40 IST
ಹೊಸಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿದರು
ಹೊಸಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿದರು   

ಹೊಸಕೋಟೆ: ‘ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ಒಬ್ಬಂಟಿ ಎಂದು ಬಿಜೆಪಿ ಹೇಳುತ್ತಿರುವುದು ಸುಳ್ಳು. ಅವರಿಗೆ ಎಲ್ಲ ನಾಯಕರ ಸಂಪೂರ್ಣ ಬೆಂಬಲವಿದೆ. ಉಪಚುನಾವಣೆಯಲ್ಲಿ ಅವರೊಂದಿಗೆ ಪಕ್ಷದ ಎಲ್ಲ ಮುಖಂಡರು ಕೆಲಸ ಮಾಡುತ್ತಿದ್ದು ಸುಳ್ಳು ಬಿಜೆಪಿಯವರ ಮನೆ ದೇವರು’ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್ ಟೀಕಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೊಂದಿಗೆ ಎಚ್.ಸಿ.ಮಹದೇವಪ್ಪ, ರಮೇಶ್ ಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರು ಪ್ರವಾಸ ಮಾಡುತ್ತಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲೇ 5 ಮಂದಿ ಶಾಸಕರು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು ಬಿಜೆಪಿ‌ಯದ್ದು ಆಧಾರ ರಹಿತ ಆರೋಪ’ ಎಂದು ಕುಟುಕಿದರು.

ನ.24ರಂದು ಸಿದ್ದರಾಮಯ್ಯ, ಡಾ.ಎಚ್‌.ಸಿ ಮಹದೇವಪ್ಪ, ಕೃಷ್ಣಬೈರೇಗೌಡ, ಡಿ.ಕೆ.ಶಿವಕುಮಾರ್, ಸೇರಿದಂತೆ ಪ್ರಮುಖ ನಾಯಕರು ವಿವಿಧೆಡೆ ನಡೆಯಲಿರುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದು ನಗರದಲ್ಲಿ ಸಂಜೆ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಹೇಳಿದರು.

ADVERTISEMENT

ಸಿದ್ದರಾಮಯ್ಯ ಅವರಿಗೆ ನೀಡಿರುವ ಸಾಲದ ವಿವರ ಬಹಿರಂಗಪಡಿಸುವ ಬಗ್ಗೆ ಎಂಟಿಬಿ ನಾಗರಾಜ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿದ್ದಾಗ ಸಹಾಯ ಮಾಡಿದ್ದಾರೆ. ಅದನ್ನು ವಾಪಸು ಕೇಳಿದರೆ ಮಾನವೀಯತೆ ಅಲ್ಲ ಎಂದು ಹೇಳಿದರು.

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆದ್ದರೆ ವಾಪಸ್ ಬಿಜೆಪಿಗೆ ಸೇರುವುದು ನಗ್ನ ಸತ್ಯ. ಅವರ ತಂದೆ ಬಿಜೆಪಿ ಸಂಸದರಾಗಿದ್ದು ಇದರಿಂದ ಎಂಟಿಬಿ ನಾಗರಾಜ್ ಹತಾಶರಾಗಿದ್ದಾರೆ. ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.