ADVERTISEMENT

ಸಂಘಟನೆಯಾದರೆ ಮಾತ್ರ ಉಳಿಗಾಲ: ಎಂ.ಎಂ.ಶ್ರೀನಿವಾಸ್

ಮೊದಲ ವರ್ಷದ ಆದಿ ಜಾಂಬವ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 12:14 IST
Last Updated 29 ಜನವರಿ 2020, 12:14 IST
ಜಯಂತಿ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು 
ಜಯಂತಿ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು    

ದೇವನಹಳ್ಳಿ: ಮೂಲ ಸೌಲಭ್ಯಗಳಲ್ಲಿದೆ ಶೈಕ್ಷಣಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯ ಸಂಘಟಿತರಾದರೆ ಮಾತ್ರ ಉಳಿಗಾಲ ಎಂದು ಅದಿ ಜಾಂಬವ ಜನಜಾಗೃತಿ ಸೇವಾ ಟ್ರಸ್ಟ್ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಎಂ.ಎಂ.ಶ್ರೀನಿವಾಸ್ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಟ್ರಸ್ಟ್ ವತಿಯಿಂದ ಮೊದಲ ವರ್ಷದ ಆದಿ ಜಾಂಬುವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪರಿಶಿಷ್ಟ ಜಾತಿ ಮೀಸಲು ವಿಧಾನಕ್ಷೇತ್ರವಾಗಿರುವ ದೇವನಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯಕ್ಕೆ ಯಾವುದೇ ಇಲಾಖೆಯ ಯೋಜನೆಯಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ. ಪರಿಶಿಷ್ಟ ಜಾತಿ ವ್ಯಾಪ್ತಿಯಲ್ಲಿ ಹಲವಾರು ಸಮುದಾಯಗಳಿವೆ. ಕಡಿಮೆ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿಯವರೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿರುವುದು ನಾವೆಲ್ಲ ಸಂಘಟನೆಗೆ ಒತ್ತು ಕೊಡದಿರುವುದರ ಫಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಸಮುದಾಯದಲ್ಲಿನ ಮಕ್ಕಳು ಜೀತಕ್ಕೆ ಬಲಿಯಾಗುತ್ತಿದ್ದಾರೆ. ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸುವ ಕೆಲಸ ಆಗಬೇಕು. ಜಾಗೃತರಾಗಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡ ಗುರಪ್ಪ ಮಾತನಾಡಿ ಅದಿ ಜಾಂಬವ ಮಾನವ ಕುಲಕ್ಕೆ ಮೂಲ ಪುರುಷ ಎಂಬುದು ಆನೇಕರಿಗೆ ಗೊತ್ತಿಲ್ಲ. ಪರಂಪರೆಯಿಂದ ತುಳಿತಕ್ಕೆ ಒಳಗಾಗಿರುವ ಸಮುದಾಯಕ್ಕೆ ಸಂವಿಧಾನದಿಂದ ಆಶ್ರಯ ಸಿಕ್ಕಿದೆ. ಮೀಸಲಾತಿಯ ಜತೆಗೆ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.

ಮಾದಿಗ ದಂಡೋರ ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಮಾರಪ್ಪ ಮಾತನಾಡಿ, ಮಾದಿಗ ಸಮುದಾಯದಲ್ಲಿ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಒಂದೇ ವೇದಿಕೆಯಡಿ ಬರಬೇಕು. ಸಮುದಾಯದ ಸಮಸ್ಯೆಗಳ ಬಗ್ಗೆ ಸಲಹೆ ಸೂಚನೆ ಪಡೆದು ಪರಸ್ಪರ ಚರ್ಚೆ ನಡೆಸಬೇಕು. ಸಂಘಟಿತ ಹೋರಾಟದಿಂದ ನಮಗೆ ಸಿಗಬೇಕಾದ ಸೌಲಭ್ಯ ಸಕಾಲದಲ್ಲಿ ಪಡೆದುಕೊಳ್ಳಬೇಕು ಎಂದು ಹೇಳಿದರು.

‘ರಾಜ್ಯದಲ್ಲಿ ಮಾದಿಗ ಸಮುದಾಯದ ಒಂದು ಕೋಟಿ ಜನರಿದ್ದಾರೆ. ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಸಂಘಟನೆಯಲ್ಲಿ ಶಿಸ್ತು ಇರಬೇಕು. ಇತರೆ ಸಂಘಟನೆಗಳಿಗಿಂತ ಭಿನ್ನವಾಗಿರಬೇಕು. ಅಸಹಾಯಕರನ್ನು ಮುಖ್ಯವಾಹಿನಿಗೆ ತರುವ ಕೆಲಸ ಟ್ರಸ್ಟ್ ಮಾಡಬೇಕು ಎಂದು ತಿಳಿಸಿದರು.

ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಂ.ಶಿವಾನಂದ, ಉಪಾಧ್ಯಕ್ಷ ಬಿ.ಕೆ.ಮುನಿರಾಜು, ಖಜಾಂಚಿ ಮುನಿರಾಜು, ನಿರ್ದೇಶಕರಾದ ಮುನಿರಾಜು, ನರಸಿಂಹಮೂರ್ತಿ, ಯಲ್ಪಪ್ಪ, ತಿರುಮಲೇಶ್, ನರಸಿಂಹ, ಬಿ.ವಿ.ಮುನಿರಾಜು, ಚಂದ್ರಶೇಖರ್, ನಾಗಾರ್ಜುನ್, ಹೇಮಂತ್, ಹರೀಶ್, ನಾಗೇಶ್, ಮುನಿಯಮ್ಮ, ಮುನಿರಾಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.