ದೊಡ್ಡಬಳ್ಳಾಪುರ: ಕನ್ನಡಪರ ಹೋರಾಟಗಾರ, ಉದ್ಯಮಿ ಜಿ.ಪಿ.ಲೋಕೇಶ್ (47) ಸಾಲಬಾಧೆಯಿಂದ ಬೇಸತ್ತು ಸೋಮವಾರ ರಾತ್ರಿ ಮನೆ ಸಮೀಪ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣ ದಾಖಲಾಗಿದೆ.
ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಕಳೆದ ಒಂದು ವಾರದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರಿಗೆ ಆತ್ಮೀಯರು, ಹಿತೈಷಿಗಳು ಧೈರ್ಯ ತುಂಬಿದ್ದರು. ಆದರೆ, ಸೋಮವಾರ ತಡರಾತ್ರಿ ನಗರದ ಗಂಗಾಧರಪುರ ಮನೆ ಹೊರಗೆ ಟರ್ಪೆಂಟೈಲ್ ಆಯಿಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಶೇ40ರಷ್ಟು ಸುಟ್ಟ ಹೋಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ನಗರದ ಮುಕ್ತಿಧಾಮದಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದ ಲೋಕೇಶ್, ಅನೇಕ ಕನ್ನಡಪರ ಹೋರಾಟ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.