ADVERTISEMENT

ಮಾರ್ಚ್ 24 ಬಲಿದಾನ್ ದಿವಸ್ ಘೋಷಿಸಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 13:44 IST
Last Updated 24 ಮಾರ್ಚ್ 2019, 13:44 IST
ಭಗತ್ ಸಿಂಗ್ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದ ಪದಾಧಿಕಾರಿಗಳು
ಭಗತ್ ಸಿಂಗ್ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದ ಪದಾಧಿಕಾರಿಗಳು   

ದೇವನಹಳ್ಳಿ: ಮಾರ್ಚ್ 24 ರ ವಾರ್ಷಿಕ ದಿನವನ್ನು ಕೇಂದ್ರ ಸರ್ಕಾರ ಯುವ ದೇಶ ಭಕ್ತ ಬಲಿದಾನ್ ದಿವಸ್ ಎಂದು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಾಗೂ ಪರಿಸರ ಸಂರಕ್ಷಣಾ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಉಗನವಾಡಿ ಮುನಿರಾಜಪ್ಪ ಒತ್ತಾಯಿಸಿದರು.

ಇಲ್ಲಿನ ಹಳೆ ತಾಲ್ಲೂಕು ಕಚೇರಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಭಗತ್ ಸಿಂಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಕ್ಕಾಗಿ ಬ್ರಿಟಿಷರ ವಿರುದ್ಧ ಬಂಡೆದ್ದು ಹೋರಾಡಿ ನೇಣಿಗೆ ಕೊರಳೊಡ್ಡಿ ಪ್ರಾಣಾರ್ಪಣೆ ಮಾಡಿದ ಯುವ ದೇಶ ಪ್ರೇಮಿ ಭಗತ್ ಸಿಂಗ್ ಮತ್ತು ಆತನ ಸಹಚರರು ದೇಶದ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.

ADVERTISEMENT

ದೇಶದ ಸ್ವಾಭಿಮಾನಕ್ಕಾಗಿ ಬಲಿದಾನಗೈದ ಅನೇಕ ರಾಷ್ಟ್ರ ಭಕ್ತರನ್ನು ಸ್ಮರಿಸಿ ಅವರ ಹೋರಾಟವನ್ನು ನೆನಪು ಮಾಡುವ ಕಾಲ ಬಂದಿದೆ. ಹೋರಾಟಕ್ಕೆ ಪ್ರೇರೇಪಿಸಿ ಹುತಾತ್ಮರಾದ ದೇಶಭಕ್ತರ ಬಗ್ಗೆ ಪ್ರತಿಯೊಬ್ಬರು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಘಟಕ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯ ಸಿಗಲು ಅನೇಕ ಮಹಾನ್ ನಾಯಕರ ಪರಿಶ್ರಮವಿದೆ. ಒಂದೊಂದು ರಕ್ತದ ಹನಿಯನ್ನು ಸ್ವಾತಂತ್ರ್ಯ ಚಳವಳಿಗಾಗಿ ಚೆಲ್ಲಲಾಗಿದೆ. ಈ ನೆಲದ ಉಳಿವಿಗಾಗಿ ಶತಮಾನಗಳ ಹೋರಾಟದ ಇತಿಹಾಸವಿದೆ. ಇತಿಹಾಸದಲ್ಲಿನ ನಾಯಕರನ್ನು ಮುಂದಿನ ಪೀಳಿಗೆಯವರು ಮರೆಯಬಾರದು ಎಂದರು.

ದೇಶಸೇವೆ, ದೇಶಭಕ್ತಿ ಮತ್ತು ಗೌರವ ಹುತಾತ್ಮರಾದ ಅದರ್ಶ ನಾಯಕರಿಂದ ಕಲಿಯಬೇಕಾಗಿದೆ ಎಂದು ಹೇಳಿದರು.

ಸಮಿತಿ ರಾಜ್ಯ ಕಾರ್ಮಿಕ ಘಟಕ ಅಧ್ಯಕ್ಷ ತಿರುಮಲೇಶ್, ವಿದ್ಯಾರ್ಥಿ ಘಟಕ ರಾಕೇಶ್, ಸಾಂಸ್ಕೃತಿಕ ಕಲಾ ಘಟಕ ಅಧ್ಯಕ್ಷ ಪ್ರಭಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.