ADVERTISEMENT

ಹಬ್ಬದ ಆಚರಣೆ ಭಕ್ತಿ ಮಾರ್ಗದಲ್ಲಿ ನಡೆಯಲಿ

ನಿಯಮಗಳಂತೆ ಗಣಪತಿ ಪ್ರತಿಷ್ಠಾಪನೆ, ವಿಸರ್ಜನೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 14:57 IST
Last Updated 27 ಆಗಸ್ಟ್ 2019, 14:57 IST
ವಿಜಯಪುರದ ಪೊಲೀಸ್ ಠಾಣೆಯಲ್ಲಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಕುರಿತು ಸಬ್‌ಇನ್‌ಸ್ಪೆಕ್ಟರ್ ನರೇಶ್‌ನಾಯಕ್ ಯುವಕರಿಗೆ ಸೂಚನೆ ನೀಡಿದರು
ವಿಜಯಪುರದ ಪೊಲೀಸ್ ಠಾಣೆಯಲ್ಲಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಕುರಿತು ಸಬ್‌ಇನ್‌ಸ್ಪೆಕ್ಟರ್ ನರೇಶ್‌ನಾಯಕ್ ಯುವಕರಿಗೆ ಸೂಚನೆ ನೀಡಿದರು   

ವಿಜಯಪುರ: ಹಬ್ಬದ ಆಚರಣೆಗಳು ಭಕ್ತಿ ಮಾರ್ಗದಲ್ಲಿ ನಡೆಯಬೇಕೆ ಹೊರತು ಬೇರೆಯವರಿಗೆ ತೊಂದರೆ ಕೊಡುವಂತಿರಬಾರದು ಎಂದು ಸಬ್‌ ಇನ್‌ಸ್ಪೆಕ್ಟರ್ ನರೇಶ್‌ ನಾಯಕ್ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ, ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಯುವುದು, ಜನರ ಪ್ರಾಣ ರಕ್ಷಣೆಯ ಜೊತೆಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ನಡೆದುಕೊಂಡು ಹಬ್ಬಗಳ ಆಚರಣೆ ಮಾಡುವುದು ಒಳ್ಳೆಯದು ಎಂದರು.

ADVERTISEMENT

ಹಳ್ಳಿಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮುನ್ನ ಆಯಾ ಗ್ರಾಮ ಪಂಚಾಯಿತಿ, ಬೆಸ್ಕಾಂ ಇಲಾಖೆಯ ಅನುಮತಿ ಪಡೆದ ನಂತರ ಪೊಲೀಸ್ ಇಲಾಖೆಯಲ್ಲೂ ಅನುಮತಿ ಪಡೆಯಬೇಕು. ಕಡ್ಡಾಯವಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಪಿ.ಓ.ಪಿ. ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಕಂಡು ಬಂದರೆ ಅಂತಹವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಸಾರ್ವಜನಿಕ ರಸ್ತೆಗಳಲ್ಲಿ ಇವುಗಳನ್ನು ಇಡಲಿಕ್ಕೆ ಅವಕಾಶವಿಲ್ಲ. ಪೂಜೆಯ ನೆಪದಲ್ಲಿ ಅಶ್ಲೀಲ ನೃತ್ಯಗಳು, ಹಾಡುಗಳನ್ನು ಹಾಕುವುದು, ಪಾನಮತ್ತರಾಗಿ ಕುಣಿದಾಡುವುದು ಮಾಡುವಂತಿಲ್ಲ. ಬೀಟ್ ಕಾನ್‌ಸ್ಟೆಬಲ್‌ಗಳು ನಿರಂತರವಾಗಿ ವೀಕ್ಷಣೆಯಲ್ಲಿರುತ್ತಾರೆ. ಒಂದು ವೇಳೆ ಅನುಮತಿ ಪತ್ರದಲ್ಲಿ ನೀಡಿರುವ ಸೂಚನೆಗಳು ಮೀರಿದರೆ ಪ್ರಕರಣ ದಾಖಲಾಗುತ್ತದೆ. ಮುಂದಿನ ವರ್ಷ ಅವರಿಗೆ ಅನುಮತಿ ನಿರಾಕರಿಸಲಾಗುತ್ತದೆ.

ಖಾಸಗಿ ಜಾಗದಲ್ಲಿ ಮೂರ್ತಿ ಇಡಬೇಕಾದಲ್ಲಿ ಭೂಮಿ ಮಾಲೀಕರಿಂದ ಪತ್ರ ಬರೆಯಿಸಿಕೊಂಡಿರಬೇಕು. ಶಾಲಾವರಣಗಳಲ್ಲಿ ಇಡುವುದಾದರೆ ಶಾಲಾ ಮುಖ್ಯಸ್ಥರಿಂದ ಅನುಮತಿ ಪಡೆದಿರಬೇಕು. 5 ದಿನಗಳ ಒಳಗೆ ವಿಸರ್ಜನೆ ಮಾಡಬೇಕು. ವಿಸರ್ಜನೆ ವೇಳೆ ಡಿ.ಜೆ. ಸೌಂಡ್ಸ್ ಬಳಕೆಗೆ ಅವಕಾಶವಿಲ್ಲ. ಸಂಜೆ 5 ಗಂಟೆಯೊಳಗೆ ಮೆರವಣಿಗೆ ಮುಗಿಸಿ 6 ಗಂಟೆಯೊಳಗೆ ವಿಸರ್ಜನೆ ಮಾಡಬೇಕು. ಮೆರವಣಿಗೆ ಮಾಡುವ ಮಾರ್ಗದ ಬಗ್ಗೆ ವಿವರವನ್ನು ಪೊಲೀಸ್ ಠಾಣೆಗೆ ನೀಡಿರಬೇಕು ಎಂದರು.

ಮೆರವಣಿಗೆಯ ವೇಳೆ ವಿನಾಕಾರಣ ಮನೆಗಳ ಬಳಿ ಪಟಾಕಿಗಳನ್ನು ಸಿಡಿಸುವುದು ಮಾಡುವಂತಿಲ್ಲ. ವಿಸರ್ಜನೆ ವೇಳೆ ಈಜು ಕಲಿತಿರುವವರು ಮಾತ್ರವೇ ನೀರಿನೊಳಗೆ ಇಳಿಯಬೇಕು. ಗಣಪತಿ ಮೂರ್ತಿ ಪ್ರತಿಷ್ಠಾಪನೆಗಾಗಿ ರಸ್ತೆಗಳಲ್ಲಿ ನಿಂತು ಹಣ ವಸೂಲಿ ಮಾಡುವಂತಿಲ್ಲ ಎಂದರು.

ವಿದ್ಯುತ್ ದೀಪಾಲಂಕಾರ ಮಾಡುವಾಗ ಜಾಗ್ರತೆ ವಹಿಸಬೇಕು,ಧ್ವನಿವರ್ಧಕ ಅಳವಡಿಸಬೇಕಾದರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕಡ್ಡಾಯವಾಗಿರುತ್ತದೆ. ಸಿಬ್ಬಂದಿ ಬಂದಾಗ ಅನುಮತಿ ಪತ್ರ ತೋರಿಸಬೇಕು. ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದಾಗಿನಿಂದಲೂ ವಿಸರ್ಜನೆ ಮಾಡುವ ತನಕ ಆಯೋಜಕರು ರಾತ್ರಿಯ ವೇಳೆ ಅಲ್ಲೆ ತಂಗಿರಬೇಕು ಎಂದು ಹೇಳಿದರು.

ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗಳ ಯುವಕರು ಸಭೆಯಲ್ಲಿ ಭಾಗವಹಿಸಿದ್ದರು. ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ಗಳಾದ ನರಸಿಂಹಮೂರ್ತಿ, ಟಿ. ಮುನಿರಾಜು, ಕಾನ್‌ಸ್ಟೆಬಲ್‌ಗಳಾದ ಕೃಷ್ಣನಾಯಕ್, ಲಕ್ಷ್ಮೀಪತಿ, ವೆಂಕಟೇಶ್, ಗೋಪಾಲಕೃಷ್ಣ, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.