ADVERTISEMENT

ಎಂಕಾಂ ವ್ಯಾಸಂಗಕ್ಕೆ 46 ವಿದ್ಯಾರ್ಥಿಗಳು

ವಿವಿಧ ಸ್ವರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 13:02 IST
Last Updated 15 ಮೇ 2019, 13:02 IST
ಸಮಾರೋಪ ಸಮಾರಂಭ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಶಿವಶಂಕರಪ್ಪ ಮತ್ತು ಗಣ್ಯರು ಭಾಗವಹಿಸಿದ್ದರು
ಸಮಾರೋಪ ಸಮಾರಂಭ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಶಿವಶಂಕರಪ್ಪ ಮತ್ತು ಗಣ್ಯರು ಭಾಗವಹಿಸಿದ್ದರು   

ದೇವನಹಳ್ಳಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ಸಾಲಿನಿಂದ ಎಂ.ಕಾಂ ವ್ಯಾಸಂಗ ಆರಂಭಗೊಂಡಿದ್ದು 46 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಪ್ರಾಂಶುಪಾಲ ಡಾ. ಶಿವಶಂಕರಪ್ಪ ಹೇಳಿದರು.

ಕಾಲೇಜು ಆವರಣದಲ್ಲಿ 2018–19 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಎನ್‌ಸಿಸಿ, ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಮತ್ತು ವಿವಿಧ ಸ್ವರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಸಂಸ್ಥೆಯು ಮೂಲ ಸೌಲಭ್ಯ ಹೆಚ್ಚಿಸಿಕೊಂಡಿದೆ. ಉತ್ತಮ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಉನ್ನತ ಮಟ್ಟಕ್ಕೆ ಸಾಕಷ್ಟು ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.

ADVERTISEMENT

ಪೂರಕ ಶೈಕ್ಷಣಿಕ ಚಟುವಟಿಕೆಗೆ ಒಟ್ಟು 50 ಸಮಿತಿಗಳನ್ನು ರಚಿಸಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನೂತನ ಎನ್‌ಸಿಸಿ ಘಟಕ ಆರಂಭಗೊಂಡಿದೆ. ಪರಿಸರ ಮತ್ತು ಜಲಮೂಲ ರಕ್ಷಣೆ, ರಕ್ತದಾನ ಶಿಬಿರ, ಕೌಶಲ ಅಭಿವೃದ್ಧಿ ಶಿಬಿರ, ಉದ್ಯೋಗ ಮೇಳ, ಮತದಾನ ಜಾಗೃತಿ, ಅಂತರ ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ನಡೆಸಿ ಇತರೆ ಕಾಲೇಜುಗಳ ಗಮನ ಸೆಳೆಯಲಾಗಿದೆ ಎಂದರು.

ಸರ್ಕಾರದ ಆದೇಶದಂತೆ 450 ವಿದ್ಯಾರ್ಥಿನಿಯರ ₹ 17 ಲಕ್ಷ ಶೈಕ್ಷಣಿಕ ಶುಲ್ಕ ಹಿಂದಿರುಗಿಸಲಾಗಿದೆ. ಇಡೀ ಕಾಲೇಜು ಉಪನ್ಯಾಸಕ ವೃಂದ ಒಂದು ತಂಡವಾಗಿ ಕೆಲಸ ಮಾಡಿ ಸಹಕರಿಸುತ್ತಿದೆ ಎಂದರು.

‘ರೂಸ’ ಮತ್ತು ‘ನ್ಯಾಕ್’ ಮಾನ್ಯತೆ ಲಭಿಸಿದೆ. ಬೈಯಪಾ ವತಿಯಿಂದ ಕಾಲೇಜು ಆವರಣದಲ್ಲಿ ಸಭಾಗೃಹ ನಿರ್ಮಾಣ ಮಾಡಲು ನಾಲ್ಕು ಕೋಟಿ ರೂಪಾಯಿ ಪೈಕಿ ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಜೂನ್‌ನಿಂದ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಹೈಕೋರ್ಟ್ ವಕೀಲ ಸುರೇಶ್ ಗೌಡ ಮಾತನಾಡಿ, ‘ಅವಿದ್ಯಾವಂತ ಪೋಷಕರು ಮಕ್ಕಳನ್ನು ವಿದ್ಯಾವಂತರರನ್ನಾಗಿಸಲು ಪಡುತ್ತಿರುವ ಸಂಕಷ್ಠ ನಿಮಗೆ ಅರ್ಥವಾಗುವುದಿಲ್ಲ, ಬರಿ ಮೊಬೈಲ್‌ನಲ್ಲಿ ಕಾಲಹರಣ ಮಾಡುವುದಕ್ಕಾಗಿ ಬಂದರೆ ಪ್ರಯೋಜನವಿಲ್ಲ’ ಎಂದು ಹೇಳಿದರು.

‘ಮೊಬೈಲ್‌ನಲ್ಲಿ ಗ್ರೂಪ್‌ ಮಾಡಿಕೊಳ್ಳವುದು ಸರಿಯಲ್ಲ. ಅನವಶ್ಯಕ ಸಂಭಾಷಣೆ, ಫೇಸ್‌ಬುಕ್, ವ್ಯಾಟ್ಸ್‌ ಆ್ಯಪ್ ಚಾಟಿಂಗ್ ಒಳ್ಳೆಯದಕ್ಕೆ ಬಳಸಿ, ಭವಿಷ್ಯದ ಜೀವನದ ಬಗ್ಗೆ ಚಿಂತಿಸಿ ಉತ್ತಮ ಮೌಲ್ಯವನ್ನು ಬೆಳೆಸಿಕೊಳ್ಳಿ’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಪರೀಕ್ಷಾ ಪೂರ್ವ ಆಡಳಿತಾಧಿಕಾರಿ ಮಹೇಶ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಕೃಷ್ಣಮೂರ್ತಿ, ಕ್ರೀಡಾ ಸಂಚಾಲಕ ರವಿಚಂದ್ರ, ಎಂ.ಕಾಂ ವಿಭಾಗ ಸಂಚಾಲಕ ಸತ್ಯನಾರಾಯಣ ಗೌಡ, ಯುವ ರೆಡ್‌ಕ್ರಾಸ್ ಸಂಚಾಲಕ ಸಜ್ಜದ್ ಪಾಷ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕ ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.