ADVERTISEMENT

ಕೋವಿಡ್ 3ನೇ ಅಲೆ ತಡೆಗೆ ಕ್ರಮ

ಮಕ್ಕಳ ಆರೋಗ್ಯ ರಕ್ಷಣೆಯೇ ರಾಜ್ಯ ಸರ್ಕಾರದ ಗುರಿ: ಸಚಿವ ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 5:36 IST
Last Updated 17 ಜೂನ್ 2021, 5:36 IST
ದೇವನಹಳ್ಳಿಯ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಹಳ್ಳಿಯಲ್ಲಿ ಮಕ್ಕಳ ತಪಾಸಣೆ ಹಾಗೂ ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ ಕಿಟ್ ವಿತರಿಸಿದರು
ದೇವನಹಳ್ಳಿಯ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಹಳ್ಳಿಯಲ್ಲಿ ಮಕ್ಕಳ ತಪಾಸಣೆ ಹಾಗೂ ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ ಕಿಟ್ ವಿತರಿಸಿದರು   

ದೇವನಹಳ್ಳಿ: ‘ಕೋವಿಡ್ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡುವಂತಹ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಹಳ್ಳಿಯಲ್ಲಿ ಮಕ್ಕಳ ತಪಾಸಣೆ ಹಾಗೂ ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳ್ಳಲಿದೆ. 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಸಿದ್ದಾರೆ. ಅದಕ್ಕಾಗಿ ವೈದ್ಯರ ಸೂಚನೆ ಮೇರೆಗೆ ಕಾಯಿಲೆ ಬರುವ ಮುಂಚೆಯೇ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು
ತಿಳಿಸಿದರು.

ADVERTISEMENT

ಗ್ರಾಮಾಂತರ ಜಿಲ್ಲೆಯಲ್ಲಿ 18 ವರ್ಷದೊಳಗಿನ 2, 72,918, 6 ವರ್ಷದೊಳಗಿನ 58,637 ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ 860 ಮಕ್ಕಳು ಇದ್ದಾರೆ. ಗಡಿಭಾಗಗಳಲ್ಲೂ ಇದ್ದಾರೆ. ಈ ಸಂಖ್ಯೆ 1,200 ದಾಟಬಹುದಾಗಿದೆ. ಎಲ್ಲಾ ಮಕ್ಕಳ ಮನೆಗೆ ವೈದ್ಯರ ತಂಡ ತೆರಳಿ ಪರೀಕ್ಷೆ ನಡೆಸಲು 20 ಮಂದಿ ವೈದ್ಯರ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಪೌಷ್ಟಿಕತೆ ವೃದ್ಧಿಸಲು ಬಾದಾಮಿ ಪೌಡರ್ 200 ಗ್ರಾಂ, 500 ಗ್ರಾಂ ಹಾಲು ಮತ್ತು ಸಕ್ಕರೆ, 20 ಗ್ರಾಂ ಬಿಸ್ಕೆಟ್, ಸಕ್ಕರೆ 200 ಗ್ರಾಂ, ವಿಟಮಿನ್ ಸಿರಪ್, ಮಾಸ್ಕ್, ಡೆಟಾಲ್ ಸೋಪು ನೀಡಲಾಗುತ್ತದೆ. ಎರಡಯ ತಿಂಗಳಲ್ಲಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

‘6 ಕಡೆ ಮಕ್ಕಳ ಆಸ್ಪತ್ರೆ ಮಾಡಿದ್ದೇವೆ. ಆಕಾಶ್ ಆಸ್ಪತ್ರೆ, ಸಿದ್ಧಾರ್ಥ ಆಸ್ಪತ್ರೆ 50, ಎಂ.ವಿ.ಜೆ. ಆಸ್ಪತ್ರೆಯಲ್ಲಿ 50 ಬೆಡ್‌ಗಳನ್ನು ಹಾಕಿದ್ದೇವೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ವೈದ್ಯರ ತಂಡವನ್ನು ಮಕ್ಕಳ ಮನೆ ಬಾಗಿಲಿಗೆ ಕರೆದುಕೊಂಡು ಹೋಗುವಂತಹ ಕೆಲಸ ಮಾಡುತ್ತೇವೆ. ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಮಕ್ಕಳ ಕೇರ್ ಸೆಂಟರ್ ಮಾಡಲು ಆದೇಶಿಸಲಾಗಿದೆ’ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ವೈದ್ಯರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ಆರಂಭಿಸಿರುವುದು ಶ್ಲಾಘನೀಯ ಎಂದರು.

ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್, ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪುಷ್ಪಲತಾ ಜಿ. ರಾಯರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಎನ್.ಎಸ್. ಮಹೇಶ್, ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಎನ್‌., ಸಿಡಿಪಿಒ ಹೇಮಾವತಿ, ತಾಲ್ಲೂಕು ಆರೋಗ್ಯಾಧಿಕಾರಿ ಸಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.