ADVERTISEMENT

ಕಾಣಿಕೆ ಪಡೆದು ಮತಗಟ್ಟೆಗೆ ಬಂದ ಸದಸ್ಯರು!

ರಾಮನಗರ–ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ 99.90ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 1:58 IST
Last Updated 11 ಡಿಸೆಂಬರ್ 2021, 1:58 IST
ಕನ್ನಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮತದಾನ ಮಾಡಿದ ಸದಸ್ಯರು
ಕನ್ನಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮತದಾನ ಮಾಡಿದ ಸದಸ್ಯರು   

ದೇವನಹಳ್ಳಿ: ರಾಮ ನಗರ– ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶುಕ್ರವಾರ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಶೇ 99.90ರಷ್ಟು ದಾಖಲೆಯ ಮತದಾನವಾಗಿದೆ.

ಬೆಳಿಗ್ಗೆ 8ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 4 ಗಂಟೆಗೆ ಮುಕ್ತಾಯವಾಯಿತು. ಗ್ರಾಮ ಪಂಚಾಯಿತಿ ಕೇಂದ್ರಗಳು, ಪುರಸಭೆ ಮತ್ತು ನಗರಸಭೆಯಲ್ಲಿ ತೆರೆದಿದ್ದ ಮತಗಟ್ಟೆಗಳಲ್ಲಿ ಸದಸ್ಯರು ಮತದಾನ ಮಾಡಿದರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು ತಮ್ಮ ಪಕ್ಷದನಾಯಕರು, ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರೊಟ್ಟಿಗೆ ಬಂದು ಮತ ಚಲಾಯಿಸಿದರು. ಕೆಲವೆಡೆ ಬೆಳಿಗ್ಗೆ 10 ಗಂಟೆಯಾದರೂ ಮತಗಟ್ಟೆಗೆ ಸದಸ್ಯರು ಬಂದು ಮತ ಚಲಾಯಿಸಿರಲಿಲ್ಲ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರನ್ನು ಹೊರತುಪಡಿಸಿ ಬಿಎಸ್‌ಪಿ, ಪಕ್ಷೇತರ ಸದಸ್ಯರಿಂದ ಮತ ಪಡೆಯಲಿಕ್ಕಾಗಿ ಮುಖಂಡರು ಕಸರತ್ತು ನಡೆಸುತ್ತಿದ್ದ ದೃಶ್ಯ ಸಾಮಾನ್ಯ
ವಾಗಿತ್ತು.

ADVERTISEMENT

ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಬೆಂಬಲಿತ 18 ಸದಸ್ಯರೊಂದಿಗೆ ಬಂದಿದ್ದ ಮಾಜಿ ಶಾಸಕ ಕೆ. ವೆಂಕಟಸ್ವಾಮಿ ಮಾತನಾಡಿ, ‘ಪಕ್ಷದ ಅಭ್ಯರ್ಥಿ ಎಸ್. ರವಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈಗ ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. ಅವರು ಕೇವಲ ಕಾಂಗ್ರೆಸ್ ಆಡಳಿತವಿರುವ ಪಂಚಾಯಿತಿಗಳಿಗೆ ಮಾತ್ರವಲ್ಲದೇ ಜೆಡಿಎಸ್ ಆಡಳಿತವಿರುವ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಅಭಿವೃದ್ಧಿ ಕೆಲಸ ಮಾಡಿದ್ದಾರೆ’ ಎಂದರು.

ಮತದಾರರು ಕೂಡ ಕಾಂಗ್ರೆಸ್ ಮೇಲೆ ಹೆಚ್ಚಿನ ಒಲವು ಹೊಂದಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಹಾಗಾಗಿ ಜೆಡಿಎಸ್, ಬಿಜೆಪಿ ಬೆಂಬಲಿತ ಸದಸ್ಯರು ಕೂಡ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ವಿಜಯಪುರ ಪುರಸಭೆ, ದೇವನಹಳ್ಳಿ ಪುರಸಭೆಗಳಲ್ಲಿ ಸ್ಥಳೀಯ ಸದಸ್ಯರು ಮತದಾನ ಮಾಡಿದರು. ಪಕ್ಷೇತರ ಸದಸ್ಯರ ಮತ ಪಡೆಯಲು ಮುಖಂಡರು ತೀವ್ರ ಕಸರತ್ತು ನಡೆಸುತ್ತಿದ್ದರು.

ಕಾಣಿಕೆಗಾಗಿ ಕಾದಿದ್ದ ಸದಸ್ಯರು: ಗ್ರಾಮ ಪಂಚಾಯಿತಿ ಸದಸ್ಯರಿಗೆ ತಮ್ಮ ಪಕ್ಷದ ನಾಯಕರು, ಮತ ಹಾಕಲು ಸಲ್ಲಿಸಬೇಕಾಗಿದ್ದ ಕಾಣಿಕೆ ಸಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಮತಗಟ್ಟೆಯ ಕಡೆಗೆ ಸುಳಿದಿರಲಿಲ್ಲ.

ಮುಖಂಡರು ಕಾರುಗಳಲ್ಲಿ ಬಂದು ಸದಸ್ಯರಿಗೆ ನೀಡಬೇಕಾಗಿದ್ದ ಕಾಣಿಕೆ ತಂದು ತಮ್ಮ ಪಕ್ಷಗಳ ಮುಖಂಡರ ಮನೆಗಳ ಬಳಿಯಲ್ಲಿ ಎಲ್ಲರನ್ನು ಕರೆದು ಸಲ್ಲಿಸಿದ ನಂತರ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.