ವಿಜಯಪುರ (ದೇವನಹಳ್ಳಿ): ಇಲ್ಲಿಯ ರಾಜಸ್ವ ನಿರೀಕ್ಷಕರ ಕಚೇರಿ ಹಾಗೂ ಉಪ ತಹಶೀಲ್ದಾರ್ ಕಚೇರಿಗೆ ತಹಶೀಲ್ದಾರ್ ಅನಿಲ್ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.
‘ಮಧ್ಯವರ್ತಿಗಳ ಹಾವಳಿ: ತಪ್ಪದ ಅಲೆದಾಟ' ಶೀರ್ಷಿಕೆ ಅಡಿ ಮಂಗಳವಾರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬೆನ್ನೆಲ್ಲೇ ತಹಶೀಲ್ದಾರ್ ಎರಡೂ ಕಚೇರಿಗಳಿಗೂ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
‘ಸಾರ್ವಜನಿಕರಿಗೆ ಸೇವೆ ಒದಗಿಸಲು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಲಂಚ ಪಡೆಯುತ್ತಿರುವ ಬಗ್ಗೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಸಣ್ಣ ಪುಟ್ಟ ಕೆಲಸಗಳಿಗೆ ಸಾರ್ವಜನಿಕರನ್ನು ಕಚೇರಿಗೆ ಪದೆಪದೇ ಅಲೆದಾಡಿಸಬಾರದು. ಸಕಾಲ ಕೌಂಟರ್ ತೆಗೆಯಬೇಕು. ನಿಗದಿತ ಸಮಯಕ್ಕೆ ಕಚೇರಿಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿರಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಚೇರಿಯನ್ನು ಶೀಘ್ರ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
‘ಸಾರ್ವಜನಿಕರು, ರೈತರು ಕೆಲಸಗಳಿಗಾಗಿ ಯಾರಿಗೂ ಹಣ ನೀಡುವ ಅಗತ್ಯವಿಲ್ಲ. ಲಂಚ ಕೇಳಿದರೆ ಖುದ್ದು ತಹಶೀಲ್ದಾರ್ ಕಚೇರಿಗೆ ಬಂದು ದೂರು ನೀಡಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.