ADVERTISEMENT

ಕಾರ್ಯಕರ್ತರಿಗೆ ಸೇವೆಯ ಜಾಗೃತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:04 IST
Last Updated 18 ಸೆಪ್ಟೆಂಬರ್ 2020, 14:04 IST
ಬಿಜೆಪಿ ಮುಖಂಡರು ವಿವಿಧ ಹಣ್ಣು ಹಂಪಲುಗಳನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗೆ ಹಸ್ತಾಂತರಿಸಿದರು
ಬಿಜೆಪಿ ಮುಖಂಡರು ವಿವಿಧ ಹಣ್ಣು ಹಂಪಲುಗಳನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗೆ ಹಸ್ತಾಂತರಿಸಿದರು   

ದೇವನಹಳ್ಳಿ: ‘ಸಾಮಾಜಿಕ ಸೇವೆಯ ಪರಿಕಲ್ಪನೆಯಲ್ಲಿ ಕಾರ್ಯಕರ್ತರಿಗೆ ಸೇವಾ ಮನೋಭಾವದ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿಜೆಪಿ ವತಿಯಿಂದ ನಡೆದ ಬಿಜೆಪಿ ಸೇವಾ ಕಾರ್ಯಕ್ರಮದ ಎರಡನೇ ದಿನ ರೋಗಿಗಳಿಗೆ ವಿವಿಧ ಹಣ್ಣು, ಬ್ರೆಡ್ ವಿತರಿಸಿ ಅವರು ಮಾತನಾಡಿದರು.

‘ಪಂಡಿತ್ ದೀನ ದಯಾಳ್, ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಜನ್ಮ ದಿನಾಚರಣೆಯನ್ನು ವಿಭಿನ್ನ ಸಾಮಾಜಿಕ ಸೇವೆಗಳ ಮೂಲಕ ಸಾರ್ಥಗೊಳಿಸುವ ಉದ್ದೇಶ ಬಿಜೆಪಿ ಕಾರ್ಯಕರ್ತರು ಹೊಂದಿದ್ದಾರೆ. ಸಾಮಾಜಿಕ ಸೇವೆ ಎಂಬುದು ತಳಮಟ್ಟದಿಂದಲೇ ಸಾಕಾರಗೊಳ್ಳಬೇಕು. ಸಮಾನತೆ ಮತ್ತಷ್ಟು ಬಲಿಷ್ಠವಾಗಬೇಕು’ ಎಂದು ಹೇಳಿದರು.

ADVERTISEMENT

ಬಿಜೆಪಿ ತಾಲ್ಲೂಕು ಘಟಕ ಅಧ‍್ಯಕ್ಷ ಸುಂದರೇಶ್, ಹಿರಿಯ ಮುಖಂಡ ಜಿ.ಚಂದ್ರಣ್ಣ ಮಾತನಾಡಿ, ‘ದೇಶ ಸೇವೆಯಲ್ಲಿ ತೊಡಗಿದವರು ಸ್ವಾತಂತ್ರ್ಯಕ್ಕಾಗಿ ಅವಿರತ ಶ್ರಮಿಸಿದವರನ್ನು ಸಾಮಾಜಿಕ ಸೇವೆ ಮೂಲಕ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಚಿಂತನೆ ಮತ್ತು ದೃಷ್ಠಿಕೋನ ಅದ್ಭುತ, ದೇಶ ರಕ್ಷಣೆಯಲ್ಲಿ ಅವರ ಪಾತ್ರ ಅಸಾಧಾರಣವಾಗಿದೆ’ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷೆ ಪುನೀತಾ, ಮಹಿಳಾ ಮೋರ್ಚಾ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ನಾಗವೇಣಿ ಮಾತನಾಡಿ, ‘ನರೇಂದ್ರ ಮೋದಿ ಆಡಳಿತ ಹಿಡಿದ ಆರಂಭದಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಉಚಿತ ಆಡುಗೆ ಅನಿಲ ವಿತರಿಸಿದರು. ಭೇಟಿ ಪಡಾವೋ ಭೇಟಿ ಬಚಾವೋ ಯೋಜನೆ ಮತ್ತು ವಿವಿಧ ಯೋಜನೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದ್ದಾರೆ. ಸ್ವಾವಲಂಬಿ ಜೀವನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ನಿಲೇರಿ ಮಂಜುನಾಥ್, ರವಿಕುಮಾರ್, ಬಿಜೆಪಿ ವಕ್ತಾರ ರಮೇಶ್ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.