ADVERTISEMENT

ಜ್ಞಾನ ಸಂಪಾದನೆಗಾಗಿ ಗುರುವಿನ ಮಾರ್ಗದರ್ಶನ ಅಗತ್ಯ: ನಾಗಲಾಪುರ ಶ್ರೀ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 14:40 IST
Last Updated 30 ಡಿಸೆಂಬರ್ 2019, 14:40 IST
ವಿಜಯಪುರದ ಪ್ರಗತಿ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿದರು
ವಿಜಯಪುರದ ಪ್ರಗತಿ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿದರು   

ವಿಜಯಪುರ: ಜ್ಞಾನವೆಂಬುದು ಮನುಷ್ಯನನ್ನು ಉತ್ತಮನನ್ನಾಗಿ ಮಾಡುತ್ತದೆ. ಅದನ್ನು ಪಡೆಯಬೇಕಾದರೆ ಪಂಚೇಂದ್ರಿಯಗಳ ಶುದ್ಧೀಕರಣವಾಗಬೇಕು. ಇದಕ್ಕೆ ವಯಸ್ಸಿನ ಮಿತಿಯಿಲ್ಲ ಎಂದು ನಾಗಲಾಪುರ ವೀರಸಿಂಹಾಸನ ಸಂಸ್ಥಾನ ಮಠಾಧ್ಯಕ್ಷ ತೇಜೇಶ ಲಿಂಗಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಗಿರಿಜಾಶಂಕರ ಕಲ್ಯಾಣಮಂದಿರದಲ್ಲಿ ಆಯೋಜಿಸಿದ್ದ ಪ್ರಗತಿ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

'ಮನುಷ್ಯರ ಆಸೆಗೆ ಮಿತಿಯಿಲ್ಲ. ಜ್ಞಾನದ ಕೊರತೆಯಿಂದಾಗಿ ಪ್ರಾಪಂಚಿಕವಾದ ವಿಚಾರಗಳಲ್ಲಿ ಹೆಚ್ಚು ತೊಡಗಿಸಿಕೊಂಡು ತನ್ನ ಹುಟ್ಟಿನ ರಹಸ್ಯ ಹಾಗೂ ಈ ಭೂಮಿಯಲ್ಲಿ ಸಾಧಿಸಬೇಕಾಗಿರುವ ಬಹಳಷ್ಟು ಕಾರ್ಯಗಳನ್ನು ಮರೆತು ಅಜ್ಞಾನದ ಅಂಧಕಾರದಲ್ಲಿ ಮುಳುಗಿ ಹೋಗುತ್ತಿದ್ದಾರೆ.ತಮ್ಮ ಜೀವನದ ರಹಸ್ಯವನ್ನು ತಿಳಿಯಲು, ತಮ್ಮ ಉಗಮಕ್ಕೆ ಕಾರಣರಾದವರು, ಬೆಳವಣಿಗೆಗೆ ಜೊತೆಯಾದವರ ಕುರಿತು ಗೌರವ ಭಾವನೆಗಳನ್ನು ಹೊಂದಿಕೊಂಡು ಮಾನವನ ಜನ್ಮದ ಮೂಲರಹಸ್ಯವಾದ ಮೋಕ್ಷಕ್ಕೆ ಸೇರಿಕೊಳ್ಳಲು ಅಗತ್ಯವಾಗಿರುವ ಮಾರ್ಗದ ಹುಡುಕಾಟಕ್ಕೆ ಬೇಕಾಗಿರುವ ಗುರುವನ್ನು ಪರಿಚಯಿಸುವುದೇ ನಿಜವಾದ ಶಿಕ್ಷಣ. ಇಂತಹ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು’ ಎಂದರು.

ADVERTISEMENT

ಪಠ್ಯಪುಸ್ತಕಗಳಲ್ಲಿ ಸಿಗುವಂತಹ ಶಿಕ್ಷಣದಿಂದ ಮಾತ್ರ ಒಂದು ಮಗು ಪರಿಪೂರ್ಣವಾದ ವ್ಯಕ್ತಿಯಾಗಲಿಕ್ಕೆ ಸಾಧ್ಯವಿಲ್ಲ. ಜನ್ಮ ರಹಸ್ಯವನ್ನು ಅರಿಯುವಂತಹ ಅರಿವು ಅವರಿಗೆ ಬರಬೇಕು. ಅಂತಹ ಸಂಸ್ಕಾರವಂತ ಶಿಕ್ಷಣವನ್ನು ಕೊಡಬೇಕು. ಪ್ರಪಂಚದಲ್ಲಿ ಯಾವುದೇ ಮೂಲೆಯಲ್ಲಿ ಅವರನ್ನು ಬಿಟ್ಟರೂ ಎಲ್ಲರೊಟ್ಟಿಗೆ ಬದುಕು ಕಟ್ಟಿಕೊಳ್ಳುವಂತಹ ಜ್ಞಾನವನ್ನು ಅವರಿಗೆ ತುಂಬಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ‘ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಮಕ್ಕಳನ್ನು ದಂಡಿಸದೆ ಜಗತ್ತಿನಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಕಷ್ಟಕರವಾಗಿದೆ. ಗುರುಕುಲ ಪದ್ಧತಿಯಿದ್ದಾಗ ಮಕ್ಕಳು ಗುರುಗಳು ಹೇಳಿದ ಪ್ರತಿಯೊಂದು ಮಾತುಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದರು. ತಂದೆ ತಾಯಿ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಈಗಿನ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಾಗಿರುವ ಪರಿಣಾಮವಾಗಿ ಮಕ್ಕಳು ಶಿಕ್ಷಕರ ಹಿಡಿತಕ್ಕೆ ಸಿಗುತ್ತಿಲ್ಲ. ಮಕ್ಕಳ ಒಳಿತಿಗಾಗಿ ಶಿಕ್ಷೆ ಮಾಡಿದರೆ ಮಾರನೇ ದಿನ ಶಿಕ್ಷಕರ ಮುಂದೆ ಪೋಷಕರು ಜಗಳ ಕಾಯುವ ಪರಿಸ್ಥಿತಿಯಿದೆ. ಇಂತಹ ವಾತಾವರಣದಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಯಮ, ಶಿಸ್ತು, ಶ್ರದ್ಧೆ, ಗುರುಹಿರಿಯರ ಬಗೆಗಿನ ಗೌರವ ಭಾವನೆ ಮೂಡಿಸುವುದು ಸುಲಭದ ಮಾತಲ್ಲ, ಆದ್ದರಿಂದ ಪೋಷಕರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ‘ಶಿಕ್ಷಣದ ಜ್ಞಾನದ ಕಡೆಗೆ ಕೊಂಡೊಯ್ಯುವ ಸಾಧನ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಬೇಕು ಎಂದು ಚಿಂತೆ ನಡೆಸುವುದು ಸಹಜ. ಉದ್ಯೋಗಕ್ಕಾಗಿ ಶಿಕ್ಷಣ ನೀಡುವುದು ಸರಿಯಲ್ಲ. ಆದ್ದರಿಂದ ಒಂದು ಮಗು ಪರಿಪೂರ್ಣವಾಗಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಂತಾಗಬೇಕು. ಅದು ಅವರ ಬಾಳಿನಲ್ಲಿ ಉತ್ತಮ ಚಿಂತನೆಗಳಿಗೆ ಎಡೆ ಮಾಡಿಕೊಡುತ್ತದೆ. ಅನೇಕ ಮಹನೀಯರ ಜೀವನವನ್ನು ಆದರ್ಶವಾಗಿ ತೆಗೆದುಕೊಂಡ ಮಕ್ಕಳು ಸಾಧಕರಾಗುತ್ತಾರೆ. ಈ ದಿಸೆಯಲ್ಲಿ ಅವರಿಗೆ ಶಿಕ್ಷಣ ಕೊಡಲಾಗುತ್ತಿದೆ ಎಂದರು.ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ, ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವ್ಯವಸ್ಥಾಪಕ ನಿರ್ದೇಶಕ ಎಸ್.ಕೃಪಾಶಂಕರ್, ಆಡಳಿತಾಧಿಕಾರಿ ಸುಧಾಸತೀಶ್, ಮುಖ್ಯಶಿಕ್ಷಕರು, ಪ್ರಾಂಶುಪಾಲರು, ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.